5,8 ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು,ಮಾ.15 – ಐದು ಮತ್ತು ಎಂಟನೇ ತರಗತಿ ಬೋರ್ಡ್‌ ಪರೀಕ್ಷೆ ನಡೆಸಲು ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. 10 ದಿನಗಳ ಬಳಿಕ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದೆ. ಆ ಮೂಲಕ ಪೋಷಕರ ಗೊಂದಲಕ್ಕೂ ತೆರೆ ಎಳೆದಿದೆ.
ಬೋರ್ಡ್‌ ಪರೀಕ್ಷೆ ರದ್ದುಪಡಿಸಿ ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದು, ಬೋರ್ಡ್‌ ಪರೀಕ್ಷೆ ನಡೆಸಲು ಆದೇಶ ಹೊರಡಿಸಿದೆ.
10 ದಿನದ ಬಳಿಕ ಪರೀಕ್ಷೆ ನಡೆಸಬೇಕು. ಮಾ.27 ನೇ ತಾರೀಖಿನಿಂದ ಪರೀಕ್ಷೆ ಪ್ರಾರಂಭಿಸಬೇಕು. ಆದರೆ ಯಾವುದೇ ವಿದ್ಯಾರ್ಥಿಗಳನ್ನು ಫೇಲ್ ಮಾಡುವಂತಿಲ್ಲ ಎಂದು ಸೂಚಿಸಿದೆ.
ನ್ಯಾಯಮೂರ್ತಿಗಳಾದ ನರೇಂದರ್ ಹಾಗೂ ಅಶೋಕ್ ಕಿಣಗಿ ಅವರಿದ್ದ ಪೀಠವು ಅರ್ಜಿ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.
ಕುಸ್ಮಾ ಪರವಾಗಿ ವಕೀಲ ಕೆ.ವಿ.ಧನಂಜಯ ಹಾಗೂ ಸರ್ಕಾರದ ಪರವಾಗಿ ಎಎಜಿ ಧ್ಯಾನ್‌ಚಿನ್ನಪ್ಪ ವಾದ ಮಂಡಿಸಿದರು.
ಇದೇ ಮಾ.13 ರಿಂದ ಆರಂಭವಾಗಬೇಕಿದ್ದ 5, 8ನೇ ತರಗತಿಯ ಬೋರ್ಡ್‌ ಪರೀಕ್ಷೆ ರದ್ದುಪಡಿಸಿ ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು.
ಎಂದಿನಂತೆ ಸಾಮಾನ್ಯ ವಾರ್ಷಿಕ ಪರೀಕ್ಷೆ ನಡೆಸಬೇಕು. ಶಾಲಾ ಮಟ್ಟದಲ್ಲೇ ಮೌಲ್ಯಮಾಪನ ಮಾಡಬೇಕು ಎಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.