ಕೌಶಲ್ಯವಿದ್ದರೆ ದೇಶ, ವಿದೇಶಗಳಲ್ಲಿ ಕೆಲಸ: ಎಸ್. ಟಿ.‌ವೀರೇಶ್ 

ದಾವಣಗೆರೆ.ಸೆ.೧೮; ನಗರದ ಐಟಿಐ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಐಟಿಐ ಘಟಿಕೋತ್ಸವ ನಡೆಯಿತು. ವಿಶೇಷ ಎಂದರೆ ಜಿಲ್ಲೆಯಲ್ಲಿ ನಡೆದ ಮೊದಲ ಐಟಿಐ ಘಟಿಕೋತ್ಸವ. ಈ ಘಟಿಕೋತ್ಸವದಲ್ಲಿ “ರಾಷ್ಟ್ರೀಯ ಟ್ರೇಡ್ ಪ್ರಮಾಣ ಪತ್ರ” ವಿತರಣೆ ಮಾಡಲಾಯಿತು. ಇದನ್ನು ಪಡೆದ ವಿದ್ಯಾರ್ಥಿಗಳಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಉದ್ಯೋಗಾವಕಾಶ ಸಿಗಲಿದೆ. ಜೊತೆಗೆ ಅತ್ಯುತ್ತಮ ಶ್ರೇಣಿ ಎಂದು ಪರಿಗಣಿಸಲಾಗುತ್ತದೆ. ಆಗಸ್ಟ್ ತಿಂಗಳಿನಲ್ಲಿ ಪರೀಕ್ಷೆ ಬರೆದಿದ್ದ ಸುಮಾರು 186 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಎಲ್ಲರಿಗೂ ವೃತ್ತಿ ಪ್ರಮಾಣ ಪತ್ರ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯ ಎಸ್. ಟಿ. ವೀರೇಶ್ ಅವರು, ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು. ಖಾಸಗಿ ಕೆಲಸಗಳತ್ತ ಯೋಚಿಸದೇ ಸ್ವ ಉದ್ಯೋಗ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು. ಜೊತೆಗೆ ಉದ್ಯಮಿಗಳಾಗುವತ್ತ ಆಲೋಚಿಸಿದರೆ ಉತ್ತಮ ಭವಿಷ್ಯ ನಿಮ್ಮದಾಗಲಿದೆ ಎಂದು ಹೇಳಿದರು. ಕೌಶಲ್ಯವಿದ್ದರೆ ದೇಶ ಮತ್ತು ವಿದೇಶಗಳಲ್ಲಿ ಕೆಲಸ ಸುಲಭವಾಗಿ ಸಿಗುತ್ತದೆ. ಕೇವಲ ವಿವಿಗಳಲ್ಲಿ ನಡೆಯುತ್ತಿದ್ದ ಘಟಿಕೋತ್ಸವ ಸಮಾರಂಭ ಈಗ ಐಟಿಐ ಕೋರ್ಸ್ ಗಳಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಘಟಿಕೋತ್ಸವ ಎಂದರೆ ಅತ್ಯುನ್ನತ ಕಾರ್ಯಕ್ರಮ. ತುಂಬಾನೇ ಮಹತ್ವ ಇರುತ್ತದೆ. ಐಟಿಐ ಓದಿದವರು ವೃತ್ತಿ ಪ್ರಮಾಣ ಪತ್ರ ಪಡೆಯುವುದರಿಂದ ವಿಫುಲ ಅವಕಾಶಗಳು ಸಿಗುತ್ತವೆ. ಇದರ ಸದುಪಯೋಗಪಡೆದುಕೊಳ್ಳಿ‌. ಜೊತೆಗೆ ಇನ್ನು ಉನ್ನತ ವ್ಯಾಸಂಗದತ್ತ ಗಮನ ಹರಿಸಿ ಎಂದು ಸಲಹೆ ನೀಡಿದರು. ಸಂಸ್ಥೆಯ ಪ್ರಾಚಾರ್ಯ ಎನ್. ಏಕನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಮಂಜುನಾಥ್, ಸಂಸ್ಥೆಯ ಆಡಳಿತಾಧಿಕಾರಿ ಕೃಷ್ಣನಾಯಕ್ ಪಾಲ್ಗೊಂಡಿದ್ದರು‌. ಚೈತ್ರಾ ಪ್ರಾರ್ಥಿಸಿದರು. ಕಿರಿಯ ತರಬೇತಿ ಅಧಿಕಾರಿ ಎಸ್. ಮಾರುತೇಶ್ ಸ್ವಾಗತಿಸಿದರು. ತರಬೇತಿ ಅಧಿಕಾರಿ ಎಂ. ಎಸ್. ರಾಜು ವಂದಿಸಿದರೆ, ಟಿ. ಮಂಜುನಾಥ್ ನಿರೂಪಣೆ ನಡೆಸಿಕೊಟ್ಟರು.

Attachments area