ಆರೋಗ್ಯ ಸೇವೆಗೆ ಹೊಸ ಆಯಾಮ
ಚಿತ್ರದುರ್ಗ. ಸೆ.೬; ಶೀಘ್ರದಲ್ಲಿಯೇ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ರದ್ದಾಗಲಿದ್ದು, ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಆಭಾ) ಮೂಲಕ ಸರ್ಕಾರ ಆರೋಗ್ಯ ಸೇವೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡುತ್ತಿದ್ದು, ಆರೋಗ್ಯ ಸೇವೆಗಳಿಗೆ ಹೊಸ ಆಯಾಮ ಕಲ್ಪಿಸಿದಂತಾಗಿದೆ.
ಭಾರತೀಯ ನಾಗರೀಕ ಆಯೂಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಭಾರತ ಸರ್ಕಾರ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಆಭಾ) ಅಥವಾ ಹೆಲ್ತ್ ಕಾರ್ಡ್ ಮೂಲಕ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿ ಒಂದೇ ಕಡೆ ಲಭ್ಯವಾಗುವಂತೆ ಮಾಡುತ್ತಿದ್ದು, ಆಭಾ ಕಾರ್ಡ್ ರಚಿಸುವ ಮೂಲಕ ವೈದ್ಯರು ಮತ್ತು ಇತರೆ ಆರೋಗ್ಯ ಸೇವಾ ಪೂರೈಕೆದಾರರಿಂದ ಡಿಜಿಟಲ್ ಆಗಿ ಎಲ್ಲಾ ರೀತಿಯ ವೈದ್ಯಕೀಯ ವರದಿಗಳು ಹಾಗೂ ಇನ್ನಿತರೆ ಮಾಹಿತಿಗಳನ್ನು ಪಡೆಯಲು ಇದು ಸಹಾಯಕವಾಗಲಿದೆ.
   ಆರೋಗ್ಯ ಸೇವೆ ಪಡೆಯುವ ಸಾರ್ವಜನಿಕರು, ಆರೋಗ್ಯ ಸೇವೆ ನೀಡುವ ಆಸ್ಪತ್ರೆ ಅಥವಾ ಸಂಸ್ಥೆ ಹಾಗೂ ವೈದ್ಯಕೀಯ ಸಿಬ್ಬಂದಿಗಳ ನಡುವೆ ಇರುವ ಅಂತರವನ್ನು ತಪ್ಪಿಸಲು, ದೇಶಾದಾದ್ಯಂತ ಮತ್ತಷ್ಟು ಪರಿಣಾಮಕಾರಿಯಾಗಿ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಆರೋಗ್ಯ ಸೇವೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ರಂಗನಾಥ್ ಮಾಹಿತಿ ನೀಡಿದರು.
ಏನಿದು ‘ಆಭಾ’ ಕಾರ್ಡ್? : ಚಿಕಿತ್ಸೆ ಪಡೆಯುವ ವ್ಯಕ್ತಿಗಳು ತಮ್ಮ ಎಲ್ಲಾ ವೈದ್ಯಕೀಯ ಮಾಹಿತಿಗಳನ್ನು ಒಂದೆಡೆ ನಿರ್ವಹಣೆ ಮಾಡುವ ಆಧಾರ್ ಕಾರ್ಡ್ ಮಾದರಿಯ 14 ಅಂಕಿಯ ವಿಶಿಷ್ಟ ನಂಬರ್ ಇದಾಗಿದ್ದು, ಅತಿ ಕಡಿಮೆ ಸಮಯದಲ್ಲಿ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯನ್ನು ಬಳಸಿ ‘ಆಭಾ’ ಕಾರ್ಡ್ ರಚಿಸಿಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಆಭಾ ಆ್ಯಪ್ ಡೌನ್ಲೋಡ್ ಮಾಡಿ ಅದಕ್ಕೆ ಮಾಹಿತಿ  ಅಪ್ಲೋಡ್ ಮಾಡಿ ‘ಆಭಾ’ ಕಾರ್ಡ್ ಪಡೆದುಕೊಳ್ಳಬಹುದು ಅಥವಾ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದಾಗುದೆ.
ಕಾರ್ಡಿನ ಉಪಯೋಗಗಳು: ದೇಶದಾದ್ಯಂತ ಆಭಾ ಕಾರ್ಡ್‍ಅನ್ನು ಡಿಜಿಟಲ್ ಆಗಿ ಹಂಚಿಕೊಳ್ಳುವ ಮೂಲಕ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಂದ ವೈದ್ಯಕೀಯ ದಾಖಲೆಗಳಾದ ಲ್ಯಾಬ್ ವರದಿಗಳು, ಪ್ರಿಸ್ಕಿಪ್ಷನ್‍ಗಳು, ಆಸ್ಪತ್ರೆ ದಾಖಲಾತಿ ಮತ್ತು ಡಿಸ್ಚಾರ್ಜ್ ವಿವರಗಳು, ಪರಿಶೀಲಿಸಿದ ವೈದ್ಯರಿಂದ ಎಂಆರ್‍ಐ ವರದಿಗಳನ್ನು ಪಡೆಯಬಹುದಾಗಿದೆ. ಈ ಕಾರ್ಡ್‍ನಿಂದ ವೈದ್ಯರ ಭೇಟಿಗಳಿಗೆ ಭೌತಿಕ ವರದಿಗಳನ್ನು ಕೊಂಡೊಯ್ಯಬೇಕಾಗಿಲ್ಲ ಹಾಗೂ ಆಸ್ಪತ್ರೆ ದಾಖಲಾತಿ ಫಾರ್ಮ್ ಭರ್ತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ.
ಆಭಾ ಕಾರ್ಡ್ ತುಂಬಾ ಸಹಕಾರಿ: “ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆಭಾ ಕಾರ್ಡ್ ತುಂಬಾ ಸಹಕಾರಿಯಾಗಲಿದ್ದು, ಈ ಮೂಲಕ ಆರೋಗ್ಯ ಸೇವೆ ಸಂಪೂರ್ಣವಾಗಿ ಡಿಜಿಟಲೀಕರಣ ಆಗುತ್ತದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್.