ಕಲಬುರಗಿ,ಜು.4-ಇಲ್ಲಿನ ಸಬ್ ಅರ್ಬನ್ ಉಪ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಸಬ್ ಅರ್ಬನ್ ಪೊಲೀಸ್ ಠಾಣೆ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಸುಮಾರು 37 ಮನೆಗಳ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ಚಿನ್ನ, ಬೆಳ್ಳಿಯ ಆಭರಣ ಮತ್ತು ನಗದು ಸೇರಿ 52, 34,000 ರೂ. ಬೆಲೆ ಬಾಳುವ ಸ್ವತ್ತು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಬ್ ಅರ್ಬನ್ ಪೊಲೀಸ್ ಠಾಣೆ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳ ಪತ್ತೆಗೆ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಎಎಸ್‍ಐ ಹುಸೇನ್ ಭಾಷಾ, ಸಿಬ್ಬಂದಿಗಳಾದ ಅಶೋಕ, ರಾಜು ಟಾಕಳೆ, ಮಂಜುನಾಥ, ವಿಶ್ವನಾಥ ಮತ್ತು ಬೀರಣ್ಣ ಅವರನ್ನೊಳಗೊಂಡ ಅಪರಾಧ ಪತ್ತೆದಳ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಸಾವಳಗಿ (ಬಿ) ಗ್ರಾಮದ ಶೀಲವಂತ ಅಲಿಯಾಸ್ ಶಿವ್ಯಾ ತಂದೆ ಅಂಜಿರ್ಯಾ ಕಾಳೆ (23), ಗಣೇಶ್ ಅಲಿಯಾಸ್ ಗಣ್ಯಾ ಅಲಿಯಾಸ್ ರತ್ನ್ಯಾ ತಂದೆ ಸಕಾರಾಮ ಪವಾರ್ (25), ತಾಜಸುಲ್ತಾನಪುರದ ರಘು ಅಲಿಯಾಸ್ ರಗಲ್ಯಾ ತಂದೆ ಸೊಪ್ಯಾ (26) ಮತ್ತು ಮಲ್ಲಪ್ಪ ತಂದೆ ಗೌನ್ಯ ಕಾಳೆ ಎಂಬುವವರನ್ನು ಬಂಧಿಸಿ ಇವರು ಕಲಬುರಗಿ ನಗರದ ವವಿಧ ಬಡಾವಣೆ, ಆಳಂದ ಪಟ್ಟಣ, ಸಾವಳಗಿ ಮತ್ತು ಪಟ್ಟಣ ಗ್ರಾಮಗಳಲ್ಲಿ ನಡೆಸಿದ ಮನೆ ಕಳ್ಳತನ ಪ್ರಕರಣಗಳಲ್ಲಿ ಬಂಗಾರ 772 ಗ್ರಾಂ.ಬಂಗಾರದ ಆಭರಣ, 1,475 ಗ್ರಾಂ.ಬೆಳ್ಳಿ ಆಭರಣ ಮತ್ತು 84 ಸಾವಿರ ರೂ.ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಈ ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಡಿಸಿಪಿ ಐ.ಎ.ಚಂದ್ರಪ್ಪ, ಸಬ್ ಅರ್ಬನ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಬೇನಾಳ, ಪಿಐ ರಮೇಶ ಕಾಂಬಳೆ, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಅರುಣ್ ಮುರಗುಂಡಿ, ಫರಹತಾಬಾದ ಪೊಲೀಸ್ ಠಾಣೆ ಪಿಐ ರಾಘವೇಂದ್ರ ಭಜಂತ್ರಿ, ಬೆರಳಚ್ಚು ವಿಭಾಗದ ಪಿಎಸ್‍ಐ ವೈಜಿನಾಥ ರೆಡ್ಡಿ, ಎಎಸ್‍ಐ ಹುಸೇನ್ ಭಾಷಾ, ಸಿಬ್ಬಂದಿಗಳಾದ ಅಶೋಕ, ರಾಜು ಟಾಕಳೆ, ಮಂಜುನಾಥ, ವಿಶ್ವನಾಥ, ಬೀರಣ್ಣ ಅವರ ಕಾರ್ಯವನ್ನು ಶ್ಲಾಘಿಸಿದರು.