ನೂತನ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟಿಸಿದ ಶಾಸಕ ದದ್ದಲ್
ರಾಯಚೂರು, ಆ.೧- ತಾಲೂಕಿನ ನೂತನ ಬಿಚ್ಚಾಲಿ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆಯನ್ನು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿ, ಗ್ರಾಮಗಳು ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳು ಜಾರಿಯಾಗುತ್ತಿವೆ.ಅದರಲ್ಲಿ ವಿಶೇಷವಾಗಿ ಮಹತ್ವಕಾಂಕ್ಷೆ ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮಭಿವೃದ್ದಿ ಪೂರಕವಾಗಿ ಅನುದಾನ ನೀಡಲಿದ್ದು, ಈ ಅನುದಾನಗಳು ಗ್ರಾಮ ಆಡಳಿತವು ಸಮಪರ್ಕವಾಗಿ ಉಪಯೋಗಿಸಿಕೊಂಡು ಗ್ರಾಮೀಣ ಜನರಿಗೆ ನಿರಂತರ ಕೆಲಸ ಒದಗಿಸಿಕೊಡುತ್ತಾ, ಬಹು ಬಾಳಿಕೆ ಬರುವಂತಹ ಆಸ್ತಿಗಳ ಸೃಜನೆ ಮಾಡಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ.ಗ್ರಾಮ ಸರ್ಕಾರಗಳು ಸುಗಮವಾಗಿ ನಡೆಯಬೇಕಾದರೆ, ಮುಖ್ಯವಾಗಿ ಸುಸಜ್ಜಿತವಾದ ಗ್ರಾಮ ಪಂಚಾಯತಿ ಕಾರ್ಯಾಲಯ ಅವಶ್ಯಕತೆ ತುಂಬಾ ಇರುತ್ತದೆ ಎಂದರು.
ಇಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಅಭಿವೃದ್ಧಿ ಹಾಗೂ ಜನಪರ ಕಾಳಜಿ ಮೂಲಕ ಗ್ರಾಮ ಪಂಚಾಯತಿಗಳು ಸಾಗಬೇಕು ಆಗ ಮಾತ್ರ ಈ ಸುಂದರ ಕಟ್ಟ ನಿರ್ಮಾಣ ಕಟ್ಟಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಂತರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ಮಾತನಾಡಿ, ೨೦೨೦ ೨೧ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮುಖಾಂತರ ಆದ್ಯತಾ ಕಾಮಗಾರಿಗಳಲ್ಲಿ ಹೊಸ ಗ್ರಾಮ ಪಂಚಾಯತಿ ಕಟ್ಟಡ ಒಂದಾಗಿದೆ. ಈ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕಾಗಿ ರೂ ೩೪ ಲಕ್ಷಗಳು ಅನುದಾನ ಸೌಲಭ್ಯವನ್ನು ನೀಡಲಾಗುತ್ತಿದೆ. ತಾಲೂಕಿನ ಯರಗೇರಾ, ಮನ್ಸಲಾಪೂರು, ಮಮದಾಪೂರ,ಮರ್ಚಟ್ಹಾಳ್, ಜಾ.ವೆಂಕಟಪೂರು, ಗುಂಜಳ್ಳಿ, ಮತ್ತು ಬಾಯಿದೊಡ್ಡಿ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆಯ ಮುಖಾಂತರ ಹೊಸ ಗ್ರಾಮ ಪಂಚಾಯತಿ ಕಟ್ಟಡಗಳು ನಿರ್ಮಾಣ ಹಂತದಲ್ಲಿರುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾನ್ವಿ ಕಾರ್ಯನಿರ್ವಾಹಕ ಅಧಿಕಾರಿ ಅಣ್ಣರಾವ್,
ಗ್ರಾಮ ಪಂಚಾಯತ್ ಅಧ್ಯಕ್ಷ ಮಾರತಮ್ಮ,
ಉಪಾಧ್ಯಕ್ಷ ದೇವಮಣಿ,ಸಹಾಯಕ ನಿರ್ದೇಶಕ ವೆಂಕಟೇಶ ದೇಸಾಯಿ, ಪಿಡಿಓ ಲಕ್ಷ್ಮೀ, ಗ್ರಾಮ ಪಂಚಾಯತ್ ಸದಸ್ಯರು,ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಇದ್ದರು.