೧೦೦ ಮಾನವ ದಿನ ಸೃಜನೆ ಮಾಡಿದ ಕುಟುಂಬಗಳಿಗೆ ಕ್ಯಾಪ್, ಶರ್ಟ್ ವಿತರಣೆ
ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಲು ಕರೆ- ವಿಜಯ
ಸಿರವಾರ.ಜು.೧೯-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಮಾಡಗಿರಿ ಗ್ರಾಮ ಪಂಚಾಯತಿ ಪಿಡಿಒ ವಿಜಯಕುಮಾರ ಹೇಳಿದರು.
ತಾಲೂಕಿನ ಮಾಡಗಿರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನರೇಗಾ ಯೋಜನೆಯಡಿಯಲ್ಲಿ ೧೦೦ ಮಾನವ ದಿನಗಳನ್ನು ಸೃಜನೆ ಮಾಡಿದ ಕುಟುಂಬಗಳಿಗೆ ಉಚಿತ ಕ್ಯಾಪ್ ಮತ್ತು ಶರ್ಟ್ ವಿತರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೂಲಿಕಾರರು ಕೆಲಸ ಮಾಡುವ ಸಂದರ್ಭದಲ್ಲಿ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದರು. ಐಇಸಿ ಸಂಯೋಜಕ ರಾಜೇಂದ್ರ ಕುಮಾರ ಅವರು ಮಾತನಾಡಿ, ೨೦೨೦-೨೧ನೇ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ೧೦೦ ದಿನ ಕೆಲಸ ಮಾಡಿದ ಕೂಲಿಕಾರರ ಕುಟುಂಬಗಳಿಗೆ ಕ್ಯಾಪ್ ಮತ್ತು ಶರ್ಟ್ ವಿತರಿಸಲಾಗುತ್ತಿದೆ. ಕೂಲಿಕಾರರು ಕೆಲಸಕ್ಕೆ ತೆರಳಿದಾಗ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕೆಂದು ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ ವೈಯಕ್ತಿಕ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು. ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಶರಣಪ್ಪ ಅವರು ಕೂಲಿಕಾರರಿಗೆ ಕ್ಯಾಪ್ ಮತ್ತು ಶರ್ಟ್ ತೋಡಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಯಲ್ಲಮ್ಮ, ವೆಂಕಯ್ಯನಾಯ್ಡು ಸದಸ್ಯರುಗಳಾದ ರವಿಕುಮಾರ, ಗರೀಬ್ ಸಾಬ್, ಶಿವಪ್ಪ, ವೀರನಗೌಡ, ಲಿಂಗನಗೌಡ, ಜಾಕೋಬ, ಬಸವರಾಜ, ಮುತ್ತಣ್ಣ, ಸಿದ್ದಲಿಂಗಪ್ಪ ಮತ್ತು ಟಿಎಇ, ಗ್ರಾಮ ಕಾಯಕ ಮಿತ್ರ, ಡಿಇಒ, ಕರವಸೂಲಿಗಾರರು, ಕೂಲಿಕಾರರು ಇದ್ದರು.