50 ಸಾವಿರ ನೋಟ್ ಪುಸ್ತಕ ನೀಡಿಕೆ ಶ್ಲಾಘನೀಯ

ಕೋಲಾರ,ನ.೨೫: ವಿದ್ಯಾಸುರಕ್ಷಾ ಕಾರ್ಯಕ್ರಮದಡಿ ಬೆಂಗಳೂರಿನ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಮಣೋತ್ ತಾಲ್ಲೂಕಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ೫೦ ಸಾವಿರ ನೋಟ್ ಪುಸ್ತಕ ನೀಡಿ ಹೃದಯವಂತಿಕೆ ಮೆರೆದಿದ್ದಾರೆ ಎಂದು ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಕೋರಗಂಡಹಳ್ಳಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಪಿಸಿ ಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ತಾಲ್ಲೂಕಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್‌ಪುಸ್ತಕಗಳನ್ನು ಶಿಕ್ಷಕರಿಗೆ ಹಸ್ತಂತರಿಸಿ ಅವರು ಮಾತನಡುತ್ತಿದ್ದರು.
ಸಮುದಾಯದ ಸಹಭಾಗಿತ್ವದಿಂದ ಮಾತ್ರ ಸರ್ಕಾರಿ ಶಾಲೆಗಳ ಅಭಿವೃದ್ದಿ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಮಣೋತ್ ಕೋಲಾರ ತಾಲ್ಲೂಕನ್ನು ತಮ್ಮ ಸೇವೆಗೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಅವರನ್ನು ಅಭಿನಂದಿಸಿದರು.
ಸರ್ಕಾರಿ ಶಾಲೆಗಳ ಮಕ್ಕಳಿಗೆ ನೆರವಾಗುವ ಮೂಲಕ ಮಧ್ಯಮ,ಬಡ ಕುಟುಂಬಗಳಿಂದ ಬರುವ ಮಕ್ಕಳೇ ಈ ಶಾಲೆಗಳಲ್ಲಿ ಹೆಚ್ಚಿರುವುದರಿಂದ ಅವರ ಭವಿಷ್ಯ ಉತ್ತಮ ಪಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಅವರ ಕಾರ್ಯ ಅಭಿನಂದನೀಯವಾಗಿದ್ದು, ಶಿಕ್ಷಕ ಗೆಳೆಯರ ಬಳಗ ಇಂತಹ ಸಾಮಾಜಿಕ ಕಾಳಜಿಯುಳ್ಳ ಕಂಪನಿ,ವ್ಯಕ್ತಿಗಳನ್ನು ಜಿಲ್ಲೆಯತ್ತ ಮುಖ ಮಾಡಲು ಶ್ರಮಿಸುತ್ತಿದೆ ಎಂದು ಅಭಿನಂದಿಸಿದರು.
ಸರ್ಕಾರಿ ಶಾಲೆಗಳಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣ ನೀಡೋಣ ಎಂದ ಅವರು ಶಾಲೆಗಳಲ್ಲಿ ಮಾತ್ರವೇ ಮಕ್ಕಳಿಗೆ ರಾಷ್ಟ್ರಾಭಿಮಾನದ ಪಾಠ ಕಲಿಸಲಾಗುತ್ತದೆ, ಮಕ್ಕಳಲ್ಲಿ ಸಂಸ್ಕಾರ ಬೆಳೆಸೋಣ, ವೃದ್ದಾಶ್ರಮಗಳನ್ನುಕೊನೆಗೊಳಿಸೋಣ ಎಂದರು.
ಉಚಿತ ನೋಟ್ ಪುಸ್ತಕ ಸೇವೆಯಿಂದ ದಾಖಲಾತಿ ಹೆಚ್ಚಳದ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಸರ್ಕಾರಿ ಶಾಲೆಗಳಿಗೆ ಮತ್ತಷ್ಟು ಸೌಲಭ್ಯಗಳನ್ನು ತರುವಲ್ಲಿ ಶಿಕ್ಷಕ ಗೆಳೆಯರ ಬಳಗ ಶ್ರಮಿಸುತ್ತಿದ್ದು, ನಮ್ಮೊಂದಿಗೆ ಶಿಕ್ಷಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕ ಗೆಳೆಯರ ಬಳಗದ ಖಜಾಂಚಿ ಚಂದ್ರಪ್ಪ, ಕೋವಿಡ್ ಆತಂಕದಲ್ಲಿ ಮಕ್ಕಳ ಸುರಕ್ಷತೆಗೆ ಒತ್ತು ನೀಡಿ, ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೆರವಾಗುವ ನಮ್ಮ ಕಾರ್ಯ ಮುಂದುವರೆಸಿಕೊಂಡು ಹೋಗುವುದಾಗಿಯೂ ಭರವಸೆ ನೀಡಿರುವ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಮಣೋತ್ ಅವರಿಗೆ ಜಿಲ್ಲೆಯ ಪರವಾಗಿ ಧನ್ಯವಾದ ಸಲ್ಲಿಸಿದರು.
ಶಾಲೆಗಳ ಮಕ್ಕಳ ಬಗ್ಗೆ ಕಾಳಜಿ ವಹಿಸಿರುವ ಅನೇಕರು ನಮ್ಮೊಂದಿಗೆ ಇದ್ದು, ನಾವು ಪ್ರಾಮಾಣಿಕವಾಗಿ ಮಕ್ಕಳಿಗೆ ಪುಸ್ತಕ ತಲುಪಿಸುವ ಮೂಲಕ ಅವರ ಸೇವೆಯನ್ನು ಪಾರದರ್ಶಕವಾಗಿಸೋಣ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಕಾರ್ಯದರ್ಶಿ ವೀರಣ್ಣಗೌಡ, ಖಜಾಂಚಿ ಚಂದ್ರಪ್ಪ,ಸಂಘಟನಾ ಕಾರ್ಯದರ್ಶಿ ವೆಂಕಟಾಚಲಪತಿಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಂ.ಎನ್.ಶ್ರೀನಿವಾಸಮೂರ್ತಿ,ಸಹಕಾರ್ಯದರ್ಶಿ ಸೋಮಶೇಖರ್, ನೌಕರರ ಸಂಘದ ನಿರ್ದೇಶಕರಾದ ಚಂದ್ರಪ್ಪ, ಶಿಕ್ಷಕ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ,ವೆಂಕಟರಾಂ ಮತ್ತಿತರರು ಉಪಸ್ಥಿತರಿದ್ದು, ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ನೋಟ್ ಪುಸ್ತಕಗಳನ್ನು ಶಿಕ್ಷಕರಿಗೆ ಹಸ್ತಂತರಿಸಿದರು.