50 ಸಾವಿರ ಜನರಿಗೆ ಸೋಂಕು 577 ಮಂದಿ ಸಾವು

ನವದೆಹಲಿ ನ. ೭- ದೇಶಾದ್ಯಂತ ಮತ್ತೆ ಕೊರೊನಾ ಅಬ್ಬರ ಹೆಚ್ಚಾಗಿದ್ದು ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫೦ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗುವುದರೊಂದಿಗೆ ಜನರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಜನರ ದಿನನಿತ್ಯದ ಬದುಕು ದುಸ್ತರವಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಿಂದುಗಳಿಗೆ ನೀಡಿರುವ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫೦ ಸಾವಿರದ ೩೫೬ ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ೮೪ ಲಕ್ಷದ ೬೨ ಸಾವಿರದ ೮೧ ಕ್ಕೆ ತಲುಪಿದೆ.

ಇದೇ ಅವಧಿಯಲ್ಲಿ ೫೭೭ ಸೋಂಕಿತರು ಸಾವನ್ನಪ್ಪಿದ್ದು ಒಟ್ಟಾರೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ೧ ಲಕ್ಷದ ೨೫ ಸಾವಿರದ ೫೬೨ ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೫ ಲಕ್ಷದ ೨೦ ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿವೆ.

ಪ್ರಸ್ತುತ ದೇಶದಲ್ಲಿ ೫ ಲಕ್ಷದ ೧೬ ಸಾವಿರದ ೬೩೨ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ ಪ್ರತಿನಿತ್ಯ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ ದೇಶದಲ್ಲಿ ೭೮ ಲಕ್ಷದ ೧೯ ಸಾವಿರದ ೮೮೬ ಸೋಂಕಿತರು ಗುಣಮುಖರಾಗಿದ್ದಾರೆ.

ಸಚಿವಾಲಯದ ಮೂಲಗಳ ಪ್ರಕಾರ ಶೇಕಡ ೮೦ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ.ಇನ್ನೊಂದೆಡೆ ದೇಶದ ೧೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡ ೭೯ರಷ್ಟು
ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಇದು ಸೋಚನೀಯ ಸಂಗತಿಯೆಂದು ಹೇಳಲಾಗಿದೆ.

ದೇಶದಲ್ಲಿ ಹೊಸದಾಗಿ ಕಂಡುಬರುತ್ತಿರುವ ಸೋಂಕು ಪ್ರಕರಣಗಳಿಗಿಂತ ಹೆಚ್ಚಾಗಿ ಚೇತರಿಸಿಕೊಳ್ಳುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಮಾಧಾನ ತರುವ ವಿಚಾರವಾಗಿದೆ.

ಸಾಂಕ್ರಾಮಿಕ ರೋಗದಿಂದ ಅತಿ ಹೆಚ್ಚು ಬಾಧಿತ ರಾಜ್ಯಗಳ ಬಗ್ಗೆ ಕರ್ನಾಟಕವು ಒಂದಾಗಿದೆ. ಅಲ್ಲದೇ ಮಹಾರಾಷ್ಟ್ರ ಕೇರಳ ದೆಹಲಿ ಪಶ್ಚಿಮ ಬಂಗಾಳ ಆಂಧ್ರಪ್ರದೇಶ ರಾಜ್ಯಗಳು ಇದೇ ಸಾಲಿಗೆ ಸೇರಿವೆ. ಮಹಾರಾಷ್ಟ್ರದಲ್ಲಿ ಗುರುವಾರ ಮತ್ತು ಶುಕ್ರವಾರ ನಡುವೆ ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆ ಆಗಿವೆ.

ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಒಂದೇ ದಿನ ಸುಮಾರು ೧೧ ಸಾವಿರಕ್ಕೂ ಹೆಚ್ಚು ಸೋಂಕಿತರ ಗುಣಮುಖರಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಾಮಾರಿ ಸೋಂಕು ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿವೆ.

ದೆಹಲಿಯಲ್ಲಿ ನಿನ್ನೆ ೭೦೦೦ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ೬೬ ಸೋಂಕಿತರು ಗುಣಮುಖರಾಗದೆ ಸಾವನ್ನಪ್ಪಿದ್ದಾರೆ.
ದೆಹಲಿಯಲ್ಲಿ ಕೋವಿಡ್-೧೯ ಮೂರನೇ ಅಲೆ ಕಾಣಿಸಿಕೊಂಡಿದ್ದು ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ನಡುವೆ ಜಾಗತಿಕವಾಗಿ ಸೋಂಕಿತರ ಸಂಖ್ಯೆ ೫೦ ದಶಲಕ್ಷಕ್ಕೆ ತಲುಪುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಬಾದತ ರಾಷ್ಟ್ರವಾದ ಅಮೆರಿಕದಲ್ಲಿ ಸಾಂಕ್ರಾಮಿಕ ರೋಗದ ಭೀಕರತೆ ಮುಂದುವರಿದಿದೆ. ಇದರ ನಡುವೆಯೂ ಅಧ್ಯಕ್ಷೀಯ ಚುನಾವಣೆ ಯಶಸ್ವಿಯಾಗಿ ನಡೆಯುತ್ತಿದೆ.