50 ಸಾವಿರ ಎಕರೆ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಪಿ. ರಾಜೀವ್

ಕಲಬುರಗಿ:ಜ.18: ರಾಜ್ಯ ಸರ್ಕಾರವು ತಾಂಡಾ ,ಗೊಲ್ಲರಹಟ್ಟಿ, ಹಾಡಿ, ಹಾಗೂ ಕ್ಯಾಂಪುಗಳಲ್ಲಿ ವಾಸಿಸುವ ಜನ ಸಮುದಾಯಕ್ಕೆ ಸುಮಾರು ಒಂದು ಲಕ್ಷ 50 ಸಾವಿರ ಹಕ್ಕುಪತ್ರ ವಿತರಣೆ ಮಾಡುವುದರ ಮೂಲಕ 50,000 ಎಕರೆ ಪ್ರದೇಶವನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಲಾಗಿದೆ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹಾಗೂ ಶಾಸಕ ಪಿ. ರಾಜೀವ್ ಕುಡಚಿ ಹೇಳಿದ್ದಾರೆ

ಕಲಬುರ್ಗಿ ಆಕಾಶವಾಣಿಯಲ್ಲಿ ಜನವರಿ 18 ರಂದು ಏರ್ಪಡಿಸಿದ ನೇರ ಫೋನ ಸಂವಾದದಲ್ಲಿ ತಾಂಡ ಕಂದಾಯ ಗ್ರಾಮಗಳಾಗಿ ಪರಿವರ್ತನೆ ವಿಷಯವಾಗಿ ಕೇಳಿದರೆ ಪ್ರಶ್ನೆಗಳಿಗೆ ಉತ್ತರಿಸಿ ಅಲ್ಲಿ ವಾಸಿಸುವ ಜನ ಸಮುದಾಯಕ್ಕೆ ಹಕ್ಕುಪತ್ರ ವಿತರಣೆ ಮಾಡುವುದರ ಮೂಲಕ ಶತಮಾನದ ಸಮಸ್ಯೆಯನ್ನು ಬಗೆಹರಿಸಿದಂತಾಗಿದೆ ವಸತಿ ಉದ್ದೇಶಕ್ಕಾಗಿ ನಿವೇಶನದ ದಾಖಲೆ ಪತ್ರಗಳನ್ನು ನೀಡಿ ಬೀದರ್ ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ಒಟ್ಟು 539 ಗ್ರಾಮಗಳ 53,362 ಫಲಾನುಭವಿಗಳನ್ನು ಗುರುತಿಸಲಾಗಿದೆ. ಪಟ್ಟಾ ಜಮೀನಿನಲ್ಲಿ 37,335 ಹಕ್ಕು ಪತ್ರಗಳು ಹಾಗೂ ಸರಕಾರಿ ಜಮೀನಿನಲ್ಲಿ 15,827 ಹಕ್ಕು ಪತ್ರಗಳನ್ನು ಸನ್ಮಾನ್ಯ ಪ್ರಧಾನಮಂತ್ರಿಯವರು ಏಕಕಾಲಕ್ಕೆ ವಿತರಿಸುವ ಮಹತ್ವದ ಯೋಜನೆ ಇದಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಸುಮಾರು 1,20,000 ತಾಂಡಾ ಕುಟುಂಬಗಳ ಜನರು ಭಾಗವಹಿಸುತ್ತಿದ್ದು ಇದೊಂದು ಐತಿಹಾಸಿಕ ದಾಖಲೆ ಎಂದರು. ಮುಂದಿನ ದಿನಗಳಲ್ಲಿ ಸಂತ ಸೇವಾಲಾಲರು ಜನಿಸಿದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪ ಪುಣ್ಯಭೂಮಿಯಲ್ಲಿ ಎರಡನೇ ಹಂತದ ಹಕ್ಕು ವಿತರಣಾ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ 40,000 ಹಕ್ಕು ಪತ್ರ ವಿತರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕೇಂದ್ರದ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

   ಈ ಮಹತ್ವದ ಯೋಜನೆಯಿಂದಾಗಿ ಶತಮಾನದ ಸಮಸ್ಯೆ ಶೇಕಡ 80 ರಷ್ಟು ಈಡೇರಿದಂತಾಗುತ್ತದೆ ಎಂದು ಅವರು ಹೇಳಿದರು. ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿರುವುದರಿಂದ ಇನ್ನು ಮುಂದೆ ಗೃಹ ನಿರ್ಮಾಣ, ಮೂಲಭೂತ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು. ಹಕ್ಕುಪತ್ರ ವಿತರಿಸುವಾಗ ತಗಲುವ  ನಿವೇಶನದ ಮಾಲೀಕತ್ವ ತೆರಿಗೆಯನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವೆ  ಭರಿಸಲಿದೆ ಎಂದು ಹೇಳಿದರು. ಮನೆ ನಿರ್ಮಾಣ ಹಾಗೂ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರ ನೀಡಲು ಸಬ್ ರಿಜಿಸ್ಟರ್ ಕಚೇರಿಗೆ ಸೂಚನೆಯನ್ನು ಕೂಡ ನೀಡಲಾಗಿದೆ ಎಂದು ಹೇಳಿದರು. ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡ ತಾಂಡಾಗಳಿಗೆ ಈ ಬಾರಿಯ ಬಜೆಟ್ಟಿನಲ್ಲಿ ವಿಶೇಷ ಸವಲತ್ತು ಪ್ರಕಟವಾಗಲಿದೆ ಈ ಬಗ್ಗೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
        ಈ ಕಾರ್ಯಕ್ರಮದಲ್ಲಿ ಸುರಪುರದ ರಾಘವೇಂದ್ರ ಭಕ್ರಿ ಯಡ್ರಾಮಿ ಕಾಕಂಡಕಿಯ ಪುಂಡಲಿಕ, ತರ್ಕಸ್ ಪೇಟೆಯ ಅಮೀನ್ ರೆಡ್ಡಿ ಕಲಬುರ್ಗಿಯ ಡಾ. ಎನ್ ಎಸ್ ಜಾಧವ್, ಸಂತೋಷ ಹದನೂರು ತಾಂಡಾ, ಯಡ್ರಾಮಿಯ ದತ್ತಾತ್ರೇಯ, ಆಳಂದ ನಿಪ್ಪಾಣಿ ತಾಂಡಾದ ಸತೀಶ್ ರಾಥೋಡ್, ಯಾದಗಿರಿ ತಾಂಡಾದ ಸಾಬಣ್ಣ ಬಾಚವಾರ, ಚಿಂಚೋಳಿ ಹೆಬ್ಬಾಳ ತಾಂಡಾದ ಜಮುನ್, ಚಿಂಚೋಳಿ ಸುಲೇಪೇಟೆಯ ಬಾಬುರಾವ್ ಬುಳ್ಳ ಮತ್ತಿತರರು ಮಾತನಾಡಿದರು. ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್ ಮತ್ತು ಮಧು ದೇಶಮುಖ್ ನೆರವಾದರು. ಆಕಾಶವಾಣಿಗೆ ಭೇಟಿ ನೀಡಿದ ಕರ್ನಾಟಕ ಲಂಬಾಣಿ ತಾಂಡದ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಜು ಕುಡಚಿಯವರನ್ನು ಆಕಾಶವಾಣಿಯ ಮುಖ್ಯಸ್ಥರಾದ ಸಂಜೀವ್ ಮಿರ್ಜಿ ಸ್ವಾಗತಿಸಿದರು.