50 ಸಾವಿರ ಆಂಪೋಟೆರಿಸಿನ್ ಬಿ ಪೂರೈಕೆಗೆ ಈಶ್ವರ ಖಂಡ್ರೆ ಆಗ್ರಹ

ಬೆಂಗಳೂರು, ಜೂ. 6- ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕಪ್ಪು ಶಿಲೀಂದ್ರ ಸೋಂಕಿನಿಂದ ಬಳಲುವ ಮಂದಿಗೆ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯಕ್ಕೆ 50 ಸಾವಿರ ಆಂಪೋಟೋರಿಸಿನ್ –ಬಿ ಪೂರೈಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಕಪ್ಪು ಶಿಲೀಂಧ್ರ ಸೋಂಕಿನಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ರಾಜ್ಯದ ಜನತೆಯನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೋವಿಡ್ ಸೋಂಕಿತರ, ಮರಣ ಹೊಂದಿದವರ ಸಂಖ್ಯೆಯಲ್ಲಿ ಸುಳ್ಳು ಹೇಳಿದ ಸರ್ಕಾರ ಈಗ, ಕಪ್ಪುಶಿಲೀಂಧ್ರ ಸೋಂಕಿನಿಂದ ನರಳುತ್ತಿರುವವರ ಮತ್ತು ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲೂ ಅಸ್ಪಷ್ಟ ಮಾಹಿತಿ ನೀಡುತ್ತಿರುವುದರಿಂದ ರಾಜ್ಯಕ್ಕೆ ಸೂಕ್ತ ಪ್ರಮಾಣದಲ್ಲಿ ಚುಚ್ಚುಮದ್ದು ಹಂಚಿಕೆಯಾಗುತ್ತಿಲ್ಲ, ಇದರಿಂದ ರಾಜ್ಯದಲ್ಲಿ ತೀವ್ರ ಕೊರತೆ ಉಂಟಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ನಿಂದ ಗುಣವಾದ 2 ಸಾವಿರಕ್ಕೂ ಹೆಚ್ಚು ಜನರಲ್ಲಿ ಕಪ್ಪು ಶಿಲೀಂಧ್ರದ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಇವರಿಗೆ ನಿತ್ಯ 4ರಿಂದ 5 ಆಂಪೋಟೋರಿಸಿನ್ –ಬಿ ಚುಚ್ಚುಮದ್ದು ನೀಡಬೇಕಾಗುತ್ತದೆ. ಆದರೆ, ರಾಜ್ಯಕ್ಕೆ ಪೂರೈಕೆ ಆಗುತ್ತಿರುವುದು ಕೆಲವೇ ಸಾವಿರ, ಹೀಗಾಗಿ ಸೋಂಕಿತರ ಪಾಡು ಹೇಳತೀರದಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಬೀದರ್ ನಿಂದ ಚಾಮರಾಜನಗರದವರೆಗೆ ಎಲ್ಲ ಕಡೆಯೂ ಆಂಪೋಟೋರಿಸಿನ್ ಬಿ ಚುಚ್ಚುಮದ್ದಿನ ತೀವ್ರ ಕೊರತೆ ಎದುರಾಗಿದೆ. ಆದರೂ ಆರೋಗ್ಯ ಇಲಾಖೆ ಇತ್ತ ಗಮನ ಹರಿಸದಿರುವುದು ನಿಜಕ್ಕೂ ದುರ್ದೈವ ಇವರಿಗೆ ಜನರ ಕಾಳಜಿಯೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.