50 ಲಕ್ಷ ದೋಚಿದ್ದ ಖದೀಮನ ಸೆರೆ

ಬೆಂಗಳೂರು,ನ.೧೨- ಅವರಿವರ ಬಳಿ ಮಾಡಿದ್ದ ಸಾಲ ತೀರಿಸಲು ಎಟಿಎಂ ಸರ್ವೀಸ್ ಮಾಡುವ ನೆಪದಲ್ಲಿ ೫೦ ಲಕ್ಷ ನಗದು ದೋಚಿ ಪರಾರಿಯಾಗಿದ್ದ ಖದೀಮನೊಬ್ಬನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸೆಕ್ಯೂರ್ ವ್ಯಾಲ್ಯು ಕಂಪನಿಯ ಉದ್ಯೋಗಿ ವಿನಯ್‌ಜೋಗಿ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ೨೫ ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೋಮೇಂದು ಮುಖರ್ಜಿ ತಿಳಿಸಿದ್ದಾರೆ.
ಆರೋಪಿಯು ಕಳೆದ ಆ. ೨೪ ರಂದು ಬ್ಯಾಡರಹಳ್ಳಿ ಹಟ್ಟಿಯಲ್ಲಿನ ಕೆನರಾಬ್ಯಾಂಕ್ ಎಟಿಎಂಗೆ ಸರ್ವೀಸ್ ಮಾಡುವ ನೆಪದಲ್ಲಿ ಹೋಗಿ ೩೦ ಲಕ್ಷ ೪ ಸಾವಿರ ನಗದನ್ನು ದೋಚಿದ್ದ. ಇದಲ್ಲದೆ ತನ್ನ ಕಂಪನಿಗೆ ಸೇರಿದ್ದ ಸುಮಾರು ೨೦ ಲಕ್ಷವನ್ನು ದೋಚಿ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ರಾಜೀವ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು ದೋಚಿದ್ದ ಹಣದಲ್ಲಿ ಹದಿನಾಲ್ಕೂವರೆ ಲಕ್ಷ ತಂದೆ-ತಾಯಿಗೆ ನೀಡಿದ್ದು, ೧೧ ಲಕ್ಷವನ್ನು ಅವರಿವರ ಬಳಿ ಮಾಡಿದ್ದ ಸಾಲ ತೀರಿಸಲು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.