50 ಲಕ್ಷ ಡೋಸ್ ಖರೀದಿಗೆ ಲಂಡನ್ ನಿರ್ಧಾರ

ಲಂಡನ್,ನ.೧೭- ಮಾಡೋರ್ನ ಔಷಧ ತಯಾರಿಕಾ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಕೋವಿಡ್ ಲಸಿಕೆ ಶೇ.೯೪.೫ ರಷ್ಟು ಯಶಸ್ವಿಯಾಗಿದೆ ಎನ್ನುವ ಮಾಹಿತಿ ಹೊರಬೀಳುತ್ತಿದ್ದಂತೆ ಇಂಗ್ಲೆಂಡ್ ೫೦ ಲಕ್ಷ ಡೋಸ್ ಲಸಿಕೆ ಖರೀದಿಸಲು ಮುಂದಾಗಿದೆ.

ಈಗಾಗಲೇ ಇಂಗ್ಲೆಂಡ್ ನಲ್ಲಿ ಪ್ರತಿಷ್ಠಿತ ಆರು ಔಷಧ ತಯಾರಿಕಾ ಸಂಸ್ಥೆ ಮತ್ತು ಪೂರೈಕೆದಾರರಿಂದ ೩೫೦ ದಶಲಕ್ಷ ಡೋಸ್ ಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದೆ.

ಇದರ ನಡುವೆ ಮಾಡೋರ್ನಾದಿಂದ ಮತ್ತೆ ೫೦ ಲಕ್ಷ ಡೋಸ್ ಖರೀದಿಗೆ ಮುಂದಾಗಿದ್ದು ಇಂಗ್ಲೆಂಡ್ ಪ್ರತಿಯೊಬ್ಬ ಜನರಿಗೂ ಲಸಿಕೆಯನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಮ್ಯಾಟ್ ಆನ್ ಕಾಕ್ ತಿಳಿಸಿದ್ದಾರೆ.

ಮಾಡೋರ್ನ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಸಿದ್ಧವಾದ ಬಳಿಕ ಅದನ್ನು ಖರೀದಿ ಮಾಡಲು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಫಿಫಿಜರ್ ಔಷಧ ತಯಾರಿಕಾ ಸಂಸ್ಥೆ, ಆಸ್ಟ್ರಾಝೆನೆಕಾ, ಸೇರಿದಂತೆ ಆರು ಪ್ರತಿಷ್ಠಿತ ಔಷಧ ತಯಾರಿಕಾ ಸಂಸ್ಥೆಗಳಿಂದ ೩೫೦ ದಶಲಕ್ಷ ಡೋಸ್ ಖರೀದಿಗೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಔಷಧ ತಯಾರಕರೊಂದಿಗೆ ಚರ್ಚೆ:

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಈಗಾಗಲೇ ಹಲವು ಔಷಧ ತಯಾರಿಕಾ ಕಂಪನಿಗಳಿಗೆ ಚರ್ಚೆ ನಡೆಸಿದ್ದು ಬ್ರಿಟನಿನಲ್ಲಿ ಆದಷ್ಟು ಬೇಗ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಜಗತ್ತಿನಲ್ಲಿ ಯಾವುದೇ ಔಷಧ ತಯಾರಿಕಾ ಸಂಸ್ಥೆ ಕರೋನ ಲಸಿಕೆಯನ್ನು ಅಭಿವೃದ್ಧಿಪಡಿಸಿದರು ಅದರ ಖರೀದಿಗೆ ಇಂಗ್ಲೆಂಡ್ ಸರ್ಕಾರ ಹಿಂದೆ ಬೀಳುವುದಿಲ್ಲ ಎಂದು ಆರೋಗ್ಯ ಸಚಿವ ಮ್ಯಾಟ್ ಹಾನ್ ಕಾಕ್ ತಿಳಿಸಿದ್ದಾರೆ.

ಕೊರೋನಾ ಸೋಂಕಿಗೆ ಲಸಿಕೆ ಉತ್ಪಾದಿಸುತ್ತಿರುವ ಎಲ್ಲಾ ಔಷಧ ತಯಾರಿಕಾ ಸಂಸ್ಥೆಗಳೊಂದಿಗೆ ಲಸಿಕೆ ಖರೀದಿ ಮಾಡುವ ಪ್ರಕ್ರಿಯೆಗಳು ಭರದಿಂದ ಸಾಗಿವೆ. ಒಮ್ಮೆ ಲಸಿಕೆ ಸಿದ್ದವಾಗುತ್ತಿದ್ದಂತೆ ಅದರ ಖರೀದಿಗೆ ಎಲ್ಲ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈಗಾಗಲೇ ಮಾಡೋರ್ನಾ ಮತ್ತು ಫಿಫಿಜರ್ ಸಂಸ್ಥೆಗಳು ಮೂರನೆ ಹಂತದ ಕೊರೋನೋ ಲಸಿಕೆ ಅಭಿವೃದ್ಧಿಯಲ್ಲಿ ಶೇಕಡ ೯೦ಕ್ಕೂ ಹೆಚ್ಚಿನ ಯಶಸ್ಸು ಸಾಧಿಸಿರುವುದಾಗಿ ಪ್ರಕಟಿಸಿದೆ.