50 ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಹೆಲ್ಪ್ ಡೆಸ್ಕ್ ಆರಂಭಿಸಿ:ಗೌರವ್ ಗುಪ್ತ

ಬೆಂಗಳೂರು, ಏ.22-ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿರುವ 50 ಖಾಸಗಿ ಆಸ್ಪತ್ರೆಗಳಲ್ಲಿ ಕೂಡಲೆ ಹೆಲ್ಪ್ ಡೆಸ್ಕ್ ಗಳನ್ನು ತೆರೆಯಬೇಕೆಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚನೆ ನೀಡಿದರು.

ಗುರುವಾರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ಸಂಬಂಧ ಎಲ್ಲಾ ವಲಯ ಆಯುಕ್ತರುಗಳು, ವಲಯ ಜಂಟಿ ಆಯುಕ್ತರುಗಳು, 28 ವಿಧಾನಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಿರುವ ಕೆಎಎಸ್ ಅಧಿಕಾರಿಗಳು ಹಾಗೂ ನಗರದ ಪ್ರಮುಖ 50 ಆಸ್ಪತ್ರೆಗಳಿಗೆ ನಿಯೋಜನೆ ಮಾಡಿರುವ ನೋಡಲ್ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದರು.

ಬಳಿಕ ಅವರು, ನಗರದಲ್ಲಿ ಕೋವಿಡ್-19 ಪ್ರಕರಣಗಳು ಕ್ರಮೇಣ ಏರಿಕೆಯಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಕಲ್ಪಿಸುವ, ಆಸ್ಪತ್ರೆಗಳಲ್ಲಿ ಸರ್ಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದಾರೆಯೇ ಎಂಬುದರ ಸಲುವಾಗಿ

ರಾಜ್ಯ ಸರ್ಕಾರವು ಪ್ರಮುಖ 50 ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಪ್ರತಿ ವಲಯಕ್ಕೂ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಯನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದೆ ಎಂದರು.

ಜೊತೆಗೆ 50 ಆಸ್ಪತ್ರೆಗಳಿಗೂ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಿದ್ದು, ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಹಾಗೂ ಆಯಾ ವಲಯಗಳ ವಾರ್ ರೂಂ ಜೊತೆ ಸಮನ್ವದಿಂದ ಕೆಲಸ ಮಾಡಿ ಯಾರೊಬ್ಬರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್ ಗೆ ಬೇಕಿರುವ ಸಿಬ್ಬಂದಿ ನಿಯೋಜನೆ ಮಾಡಿಕೊಂಡು ಕೂಡಲೆ ಹೆಲ್ಪ್ ಡೆಸ್ಕ್ ತೆರೆಯಬೇಕೆಂದು ಸೂಚನೆ ನೀಡಿದರು.

ಹೆಲ್ಪ್ ಡೆಸ್ಕ್ ಆರಂಭಿಸಿದ ನಂತರ ಆಸ್ಪತ್ರೆಗೆ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಪಾಲಿಕೆ ವಲಯಗಳ ವಾರ್ ರೂಂ ಜೊತೆ ಸಂಪರ್ಕದಲ್ಲಿದ್ದು, ಅಗತ್ಯ ಮಾಹಿತಿ ನೀಡಬೇಕು. ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ಬಂದರೆ ಹಾಸಿಗೆ ವ್ಯವಸ್ಥೆ ಮಾಡಬೇಕು.

ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿ ಗುಣಮುಖರಾದ ಬಳಿಕ ಹಾಸಿಗೆ ಖಾಲಿಯಾಗಿರುವ ಬಗ್ಗೆ ವಾರ್ ರೂಂಗೆ ಮಾಹಿತಿ ನೀಡಬೇಕು. ಆ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪೋರ್ಟಲ್‌ನಲ್ಲಿ ಹಾಸಿಗೆ ಖಾಲಿಯಿರುವ ಬಗ್ಗೆ ಮಾಹಿತಿ ಅಳವಡಿಸಿದಾಗ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ ಹಾಸಿಗೆ ಖಾಲಿಯುರುವ ಬಗ್ಗೆ ಮಾಹಿತಿ ಲಭ್ಯವಾಗಲಿದ್ದು, ಮತ್ತೋರ್ವ ರೋಗ ಲಕ್ಷಣಗಳಿರುವ ಸೋಂಕಿತ ವ್ಯಕ್ತಿಯನ್ನು ಹಾಸ್ಪತ್ರೆಗೆ ದಾಖಲಿಸಲು ಸುಲಭವಾಗಲಿದೆ. ಈ ಸಂಬಂಧ ಎಲ್ಲಾ ನೋಡಲ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಎಂದರು.

ನಗರದಲ್ಲಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿಗೂ ಕೆಎಎಸ್ ಅಧಿಕಾರಿಯನ್ನು ನಿಯೋಜಿಸಿದ್ದು, ಆ ಅಧಿಕಾರಿಗಳು ವಲಯ ಆಯುಕ್ತರು, ಜಂಟಿ ಆಯುಕ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕೋವಿಡ್ ಸೋಂಕು ಉಲ್ಬಣಗೊಳ್ಳುವುದನ್ನು ನಿಯಂತ್ರಿಸಬೇಕು. ಕಳೆದ ವರ್ಷದ ಹಾಗೆಯೇ ಈ ಬಾರಿಯೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಶ್ರದ್ಧೆಯಿಂದ ಕೆಲಸ ಮಾಡಿ ಕೋವಿಡ್ ನಿಯಂತ್ರಿಸಬೇಕು ಎಂದು ಸೂಚನೆ ನೀಡಿದರು.