50 ಅಡಿಗೆ ಅಂತಿಮ : ಎರಡು ದಿನಗಳಲ್ಲಿ ಕಾರ್ಯಾಚರಣೆ

ತೀನ್ ಖಂದೀಲ್ – ಅಶೋಕ ಡಿಪೋ ರಸ್ತೆ ಅಗಲೀಕರಣ
ರಾಯಚೂರು.ಡಿ.24- ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತೀನ್ ಖಂದೀಲ್‌ನಿಂದ ಅಶೋಕ ಡಿಪೋ ವರೆಗಿನ ರಸ್ತೆ ಅಗಲೀಕರಣ ಕಾರ್ಯಾಚರಣೆ ಮುಂದಿನ ಎರಡು ದಿನಗಳಲ್ಲಿ ಆರಂಭಿಸಲು ಇಂದು ಮುಹೂರ್ತ ನಿಗದಿ ಪಡಿಸಲಾಗಿತ್ತು.
ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರ ಅಧ್ಯಕ್ಷತೆಯಲ್ಲಿ ತೀನ್ ಖಂದೀಲ್‌ನಿಂದ ಅಶೋಕ ಡಿಪೋವರೆಗಿನ ಆಸ್ತಿ ಮಾಲೀಕರೊಂದಿಗೆ ಸುಧೀರ್ಘ ಚರ್ಚೆ ನಡೆಸಲಾಯಿತು. ತೀನ್ ಖಂದೀಲ್ – ಶಶಿಮಹಲ್ ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣಕ್ಕೆ ಸಂಬಂಧಿಸಿ ಈಗಾಗಲೇ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಶಶಿಮಹಲ್ ವೃತದಿಂದ ಅಶೋಕ ಡಿಪೋವರೆಗೆ ಅಗಲೀಕರಣ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ. ಆದರೆ, ತೀನ್ ಖಂದೀಲ್‌ನಿಂದ ಅಶೋಕ ಡಿಪೋವರೆಗಿನ ಕಾಮಗಾರಿ ಆರಂಭಕ್ಕೆ ಸಂಬಂಧಿಸಿ ಇರುವ ತೊಡಕು ಈ ಸಭೆಯಲ್ಲಿ ನಿವಾರಿಸಲಾಯಿತು.
50 ಅಡಿ ರಸ್ತೆ ಅಗಲೀಕರಣ, ಚರಂಡಿ ಮತ್ತು ಬೀದಿ ದೀಪ ಅಳವಡಿಕೆಯ ಒಟ್ಟು ಯೋಜನೆಯನ್ನು ಆಸ್ತಿ ಮಾಲೀಕರ ಮುಂದೆ ವಿವರಿಸಲಾಯಿತು. ಈ ರಸ್ತೆಯ ವ್ಯಾಪಾರಿ ಮತ್ತು ನಿವಾಸಿಗಳು 45 ಅಡಿ ಅಗಲೀಕರಣಕ್ಕೆ ಮನವಿ ಮಾಡಿದರು. ಅಧ್ಯಕ್ಷ ಈ.ವಿನಯ ಅವರು 50 ಅಡಿ ರಸ್ತೆ ಅಲೀಕರಣದಿಂದ ಸಂಚಾರ ಮತ್ತು ವಿವಿಧ ಮೂಲಭೂತ ಸೌಕರ್ಯ ಒದಗಿಸುವ ಪ್ರಕ್ರಿಯೆ ಅನುಕೂಲಕರ. ಈ ಹಿನ್ನೆಲೆಯಲ್ಲಿ ಭವಿಷ್ಯತ್ತನ್ನು ದೃಷ್ಟಿಯಲ್ಲಿಟ್ಟು, 50 ಅಡಿ ಅಗಲೀಕರಣಕ್ಕೆ ಸಹಕರಿಸುವಂತೆ ಕೋರಲಾಯಿತು.
ಅಧ್ಯಕ್ಷರೊಂದಿಗೆ ಈ ಕುರಿತು ಚರ್ಚೆ ನಂತರ ಎಲ್ಲಾ ಮಾಲೀಕರು 50 ಅಡಿ ಅಗಲೀಕರಣಕ್ಕೆ ಸಹಮತ ವ್ಯಕ್ತಪಡಿಸಿದರು. ಅಗಲೀಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವ ಉದ್ದೇಶದಿಂದ ಈ ಸಭೆ ಮಹತ್ವದ್ದಾಗಿತ್ತು. ಅಲ್ಲಿಯ ನಿವಾಸಿಗಳು ಮತ್ತು ಮಾಲೀಕರು ಅಗಲೀಕರಣಕ್ಕೆ ಒಪ್ಪಿಗೆ ನೀಡಿದ್ದರಿಂದ ಮುಂದಿನ ಎರಡು ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಲು ತೀರ್ಮಾನಿಸಲಾಯಿತು. ತೀನ್ ಖಂದೀಲ್‌ನಿಂದ ಅಶೋಕ ಡಿಪೋವರೆಗಿನ ರಸ್ತೆ ಅಗಲೀಕರಣ ಕಳೆದ ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದೆ.
ಎರಡು ವರ್ಷಗಳಿಂದ ಅಗಲೀಕರಣ ಪ್ರಕ್ರಿಯೆ ಆರಂಭಿಸಲಾಯಿತು. ಆದರೆ, ಕಾರಣಾಂತರಗಳಿಂದ ಈ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಈ ಕಾರ್ಯಾಚರಣೆ ಆರಂಭಿಸಿ, ಶೀಘ್ರ ಈ ರಸ್ತೆ ಜನ ಸಂಚಾರಕ್ಕೆ ಒದಗಿಸಲು ಅಧ್ಯಕ್ಷರು, ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವೆಂಕಟೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.