5 ಸಾವಿರ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ: ಡಿಕೆಶಿ

ಬೆಂಗಳೂರು, ಜೂ.9- ತೈಲ ಬೆಲೆ ಏರಿಕೆ ವಿರೋದಿಸಿ ರಾಜ್ಯದಲ್ಲಿ ಐದು ದಿನಗಳ ಕಾಲ 5 ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ‘100 ನಾಟೌಟ್’ ಅಭಿಯಾನ ನಡೆಸಲಾಗುವುದು‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನರ ಜೇಬು ಲೂಟಿ ಮಾಡುತ್ತಿದೆ. ಇದನ್ನು ಖಂಡಿಸಿ ಇದೇ ತಿಂಗಳು 11ರಿಂದ 15 ರವರೆಗೂ ಐದು ದಿನಗಳ ಕಾಲ 5 ಸಾವಿರ ಪೆಟ್ರೋಲ್ ಬಂಕ್ ಗಳ ಮುಂದೆ ನಡೆಯಲಿದೆ‌ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜೂ. 11 ರಂದು ಎಲ್ಲ ಜಿಲ್ಲಾ ಕೇಂದ್ರ, 12 ರಂದು ತಾಲೂಕು ಕೇಂದ್ರಗಲ್ಲಿ, 13 ರಂದು ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಕೇಂದ್ರಗಳಲ್ಲಿ, 14 ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿ ಪೆಟ್ರೋಲ್ ಬಂಕ್ ಗಳಲ್ಲಿ, 15 ರಂದು ಪ್ರಮುಖ ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.

‘ದೇಶದ ಇತಿಹಾಸ ಪುಟಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ, ದಾಖಲೆಗಳನ್ನು ಮುರಿಯುತ್ತಿದೆ. ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ ಎಂದು ಹೇಳಿದ ಅವರು ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎಂಎಸ್ ಯುಐ, ರೈತ ಘಟಕ, ಹಿಂದುಳಿದ, ಅಲ್ಪಸಂಖ್ಯಾತ ಘಟಕ, ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಸದಸ್ಯರು ಐದು ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ಬೆಳಗ್ಗೆ 11 ರಿಂದ 12 ರವರೆಗೂ ಒಂದು ಗಂಟೆಗಳ ಕಾಲ ಪ್ರತಿಭಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಎಲ್ಲ ಜಿಲ್ಲೆಗಳ ಉಸ್ತುವಾರಿಗೆ ಒಬ್ಬೊಬ್ಬ ನಾಯಕರನ್ನು ನೇಮಿಸಲಾಗುತ್ತಿದೆ. ಕೊರೊನಾ ಭ್ರಷ್ಟಾಚಾರ ವಿಚಾರವಾಗಿ ನಾಯಕರು ಪ್ರತಿ ಜಿಲ್ಲೆಗೆ ಹೋಗಿ ಪತ್ರಿಕಾಗೋಷ್ಠಿ ಮಾಡಿದಂತೆ, ಈಗಲೂ ಪ್ರತಿಭಟನೆ ನೇತೃತ್ವಕ್ಕೆ ನಾಯಕರನ್ನು ನೇಮಕ ಮಾಡಲಾಗುವುದು. ಈ ಉಸ್ತುವಾರಿ ಹೊತ್ತಿರುವ ನಾಯಕರು ಜೂಮ್ ಮೂಲಕ ಪ್ರತಿಭಟನೆ ವೀಕ್ಷಿಸಬೇಕು ಎಂದು ಹೇಳಿದರು.

21 ಲಕ್ಷಕೋಟಿ ಸಂಗ್ರಹ

ಕೇಂದ್ರ ಸರ್ಕಾರ ಜನವರಿಯಲ್ಲಿ 16 ಬಾರಿ, ಫೆಬ್ರವರಿಯಲ್ಲಿ 16, ಮೇ ನಲ್ಲಿ 16 ಬಾರಿ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದೆ. ಚುನಾವಣೆ ನಡೆದ ಮಾರ್ಚ್, ಏಪ್ರಿಲ್ ನಲ್ಲಿ ಬೆಲೆ ಏರಿಕೆ ಮಾಡಲಿಲ್ಲ. ಕೇಂದ್ರ ಸರ್ಕಾರ ಈ ಬೆಲೆ ಏರಿಕೆಯಿಂದ 21.60 ಲಕ್ಷ ಕೋಟಿ ಹಣವನ್ನು ಸಂಪಾದಿಸಿದೆ ಎಂದು ದೂರಿದರು.

ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನದಲ್ಲಿನ ದರದ ಜತೆ ಲೆಕ್ಕ ಹಾಕಿ. ಜಿಡಿಪಿಯು ಅವರಿಗಿಂತ ಕೆಳಗೆ ಕುಸಿದಿದೆ. ಬಲಿಷ್ಠ ಭಾರತಕ್ಕೆ ಇಂತಹ ದುಸ್ಥಿತಿ ಬಂದಿದೆ ಎಂದರು.

ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ನರಸಿಂಹ ರಾವ್, ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರ ಕಾಲವನ್ನು ಮೆಲಕು ಹಾಕಬೇಕು. ಆಗ ಯಾವ ರೀತಿ ಜನರ ಭಾವನೆ ಇತ್ತು. ಸರಕಾರ ತೆರಿಗೆ ನಿಯಂತ್ರಣ ಮಾಡಿದ್ದು ಗಮನಿಸಬೇಕು. ಈ ಸರ್ಕಾರ ಇದ್ಯಾವುದನ್ನು ಗಮನಿಸದೆ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.