5 ವರ್ಷ ನಿಮ್ಮ ಜೊತೆಗಿದ್ದು ಸೇವೆ ಮಾಡುತ್ತೇನೆ: ಹೆಚ್.ಟಿ.ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.11:- ಶಾಸಕ ಸ್ಥಾನ ನೀವು ಕೊಟ್ಟ ಬಳುವಳಿ ಮುಂದಿನ ಐದು ವರ್ಷಗಳವರೆಗೆ ನಿಮ್ಮ ಜೊತೆಗಿದ್ದು ನಿಮ್ಮ ಸೇವೆ ಮಾಡುತ್ತೇನೆ ಎಂದು ನೂತನ ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಹಲವಾರು ಗ್ರಾಮಗಳಿಗೆ ತೆರಳಿ ತಮಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ತಿಳಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಆಡಳಿತ ಪಕ್ಷದ ಸರ್ಕಾರದ ಅಂಗವಾಗಿದ್ದ ಒಬ್ಬ ಸಚಿವರಿದ್ದರೂ ನನ್ನ ಹಾಗೂ ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ನಿರೀಕ್ಷೆಗಿಂತ ಅಧಿಕ ಮತಗಳನ್ನು ಒಬ್ಬ ರೈತನ ಮಗನಿಗೆ ನೀಡಿದ್ದೀರಿ. ರೈತರ ಮಕ್ಕಳೂ ಸಹ ಶಾಸಕರಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ನಿಮಗೆ ಮುಂದಿನ ಐದು ವರ್ಷಗಳ ಕಾಲ ನಿಷ್ಟೆಯಿಂದ ಕೆಲಸ ಮಾಡಿ ತೋರಿಸುತ್ತೇನೆ. ತಿಂಗಳಿನ 20-25 ದಿನಗಳು ನಿಮ್ಮೊಂದಿಗೆ ಇದ್ದು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಲಿದ್ದೇನೆ ಎಂದರು. ಶಾಸಕರ ಕರ್ತವ್ಯಗಳೇನು ಜನಸಾಮಾನ್ಯರೊಂದಿಗೆ ಶಾಸಕರು ಹೇಗೆ ಬೆರೆತು ಕೆಲಸ ಮಾಡಬಹುದು ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇನೆ. ರಾಜ್ಯದಲ್ಲಿ ವಿರೋಧ ಪಕ್ಷದ ಆಡಳಿತವಿದ್ದರೂ ಒಬ್ಬ ಜವಾಬ್ದಾರಿಯುತ ಶಾಸಕನಾಗಿ ನಿಮ್ಮ ಮನೆಮಗನಂತೆ ಕೆಲಸ ಮಾಡಲಿದ್ದೇನೆ. ಅದಕ್ಕಾಗಿಯೇ ಗೆಲುವು ಸಾಧಿಸಿದ ನಂತರ ತಾಲ್ಲೂಕಿನ ಎಲ್ಲಾ 365 ಹಳ್ಳಿಗಳಿಗೂ ಬೇಟಿನೀಡಿ ಅವರುಗಳಿಗೆ ಅಭಿನಂದನೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ ಎಂದಿಗೂ ನಾನು ಶಾಸಕ ಎಂಬ ಅಹಂಭಾವನೆ ಇಲ್ಲದೇ ಈ ಹಿಂದಿನಂತೆಯೇ ನಿಮ್ಮೊಂದಿಗಿದ್ದು ನಿಮ್ಮ ಸೇವೆ ಮಾಡಲಿದ್ದೇನೆ. ನಿಮ್ಮ ಗ್ರಾಮದ ಯಾವುದೇ ರೀತಿಯ ಸಾರ್ವಜನಿಕ ಸಮಸ್ಯೆಗಳಿದ್ದರೆ ನನಗಾಗಲಿ ಅಥವಾ ನನ್ನ ಕಛೇರಿಗಾಗಲಿ ಮಾಹಿತಿ ಒದಗಿಸಿದರೆ ಅವುಗಳನ್ನು ಶೀಘ್ರವಾಗಿ ಪರಿಹರಿಸುವ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿಮಂಜೇಗೌಡ, ತಾಪಂ ಮಾಜಿ ಸದಸ್ಯ ಐಕನಹಳ್ಳಿಕೃಷ್ಣೇಗೌಡ, ವಿಎಸ್‍ಎಸ್‍ಎನ್ ಮಾಜಿ ಅಧ್ಯಕ್ಷ ಶೇಖರ್, ಕಿಕ್ಕೆರಿ ಹೋಬಳಿ ಯುವ ಜನತಾದಳದ ಅಧ್ಯಕ್ಷ ಕಡಹೆಮ್ಮಿಗೆ ವೆಂಕಟೇಶ್, ಐನೋರಹಳ್ಳಿಚಂದ್ರು ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.