
• ಚಿ.ಗೋ ರಮೇಶ್
“ಮಠದಿಂದ ಆರಂಭವಾದ ಜೀವನದ ಪಯಣ, ನಾಟಕ, ಸಿನಿಮಾ ಹೀಗೆ ಸಾಗಿದೆ.. ಐದು ವರ್ಷದ ನಾಟಕದ ಅನುಭವ ಚಿತ್ರರಂಗದಲ್ಲಿ ಐವತ್ತು ವರ್ಷ ಕರೆತಂದಿದೆ. ಎಲ್ಲವೂ ಭಗವಂತನ ಲೀಲೆ ನಾನು ನಿಮಿತ್ತ ಮಾತ್ರ..”
ಹೀಗಂತ ಹೇಳಿಕೊಂಡರು ಹಿರಿಯ ನಟ ಅನಂತ್‍ನಾಗ್. ಚಿತ್ರರಂಗ ಪ್ರವೇಶಿಸಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಘವೇಂದ್ರ ಚಿತ್ರವಾಣಿ ಹಮ್ಮಿಕೊಂಡಿದ್ದ “ ಸುವರ್ಣ ಅನಂತ” ಅಭಿನಂದನಾ ಸಮಾರಂಭದಲ್ಲಿ ಬದುಕಿನ ಯಾನವನ್ನು ನಿರೂಪಕ, ನಟ ರಮೇಶ್ ಅರವಿಂದ್ ಮುಂದೆ ಬಿಚ್ಚಿಟ್ಟರು.
ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳನ್ನು ತೆಗೆದುಕೊಂಡರೂ ಓದು ತಲೆಗೆ ಹತ್ತಲಿಲ್ಲ. ಊರಿನ ಮಂದಿ ಯಾರಾದರೂ ಎದುರಿಗೆ ಸಿಕ್ಕರೆ ಓದಲು ಏನಾಗಿದೆ ಎಂದು ಪ್ರಶ್ನಿಸುತ್ತಾರೆ ಎಂದು ಬೇರೆ ದಾರಿಯಲ್ಲಿ ಹೋದ ಉದಾಹರಣೆಯೂ ಇದೆ.
ಸೇನೆಗೆ ಸೇರಬೇಕು ಎಂದು ಬಯಸ್ಸಿದೆ ತೂಕ ಇಲ್ಲ ಎಂದು ವಾಪಸ್ಸು ಕಳುಹಿಸಿದರು. ವಾಯು ಸೇನೆಯಲ್ಲಿ ನಿನ್ನ ಕಣ್ಣು ಸರಿಯಿಲ್ಲ ಎಂದು ರಿಜೆಕ್ಟ್ ಮಾಡಿದರು. ಹೀಗಾಗಿ ನಾಟಕದ ಕಡೆ ಒಲವು ಬೆಳೆಸಿಕೊಂಡೆ. ವಯಕ್ತಿಕವಾಗಿ ಅನುಭವಿಸದ ಪಾತ್ರಗಳನ್ನು ನಾಟಕದ ಪಾತ್ರಗಳ ಮೂಲಕ ಅನುಭವಿಸಿದೆ ಎಂದರು.
ಯಾರನ್ನಾದರೂ ನೋಡಿದರೆ ಅವರ ಹಾವ ಭಾವ, ನಗು, ಕೋಪ,ಗಂಭೀರ ಸ್ವಭಾವ, ಗಂಟು ಹಾಕಿಕೊಂಡ ಮುಖದ ಲಕ್ಷಣಗಳನ್ನು ಅನುಕರಣೆ ಮಾಡುತ್ತಿದ್ದೆ. ನೆಂಟರು ಮನೆಗೆ ಬಂದೂ ಅವರ ಹಾಗೆ ಅನುಕರಣೆ ಮಾಡುತ್ತಿದ್ದೆ. ತಾಯಿ . ಅನಂತಾ.. ಹಾಗೆ ಮಾಡಬಾರದು ಎಂದು ಕಣ್ಸನ್ನೆಯಲ್ಲೇ ಹೇಳುತ್ತಿದ್ದರು. ಹಾಗೆ ಮಾಡಿದ ಅನುಕರಣೆ ಚಿತ್ರರಂಗದಲ್ಲಿ ಇಷ್ಟು ವರ್ಷ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಜೀವನದಲ್ಲಿ ಎದರಿಕೊಂಡ ನಿದರ್ಶನವೇ ಇಲ್ಲ. ನನ್ನ ದೃಷ್ಠಿಯಲ್ಲಿ ಭಯ ಎನ್ನುವುದು ನಿರ್ಭಯದಂತಿತ್ತು. ಸಮುದ್ರ, ನದಿಯಲ್ಲಿ ಈಜಿದ್ದೇನೆ. ನನಗೆ ಇದ್ದುದೇ ಒಂದೇ ಭಯ ಅದು ಪರೀಕ್ಷೆಯ ಭಯ ಎನ್ನುವ ಸಂಗತಿ ಅನಾವರಣ ಮಾಡಿದರು.
ಸಿಕ್ಕ ಒಂದೊಂದು ಪಾತ್ರವೂ ವಿಭಿನ್ನತೆಯಿಂದ ಕೂಡಿವೆ. ನಾಯಕನಾಗಿ ಹಾಡುವುದು ರಾಜ್‍ಕುಮಾರ್ ಅವರಿಗೆ ಕಲೆ ಒಲಿದಿದ್ದಿತು ಆದರೆ ಅದು ಎಲ್ಲಾ ನಟರಿಗೆ ಸಾಧ್ಯವಾಗಲಿಲ್ಲ. ಸಿನಿಮಾ ಜೀವನದಲ್ಲಿ ಏರು,ಪೇರು, ತೇರು ಎಲ್ಲವೂ ಇದೆ. ಪ್ರೇಕ್ಷಕರು ಒಪ್ಪಿದರೆ ನಾವು ತೇರಿನಲ್ಲಿ ಹೋಗಬಹುದು . ಪ್ರತಿಯೊಂದು ವೃತ್ತಿಯಲ್ಲಿಯೂ ಅನಿಶ್ವಿತತೆ ಕೂಡಿದೆ. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ ಎಂದರು ಅನಂತ್ ನಾಗ್
ನಾಯಕ ಯಾರು ಗೊತ್ತಾ
ತನಗೆ ವಹಿಸಿದ ಜವಬ್ದಾರಿಯನ್ನು ಯಶಸ್ವಿಯಾಗಿ ಯಾರು ನಿಬಾಯಿಸುತ್ತಾರೋ ಅವರೇ ನಿಜವಾದ ನಾಯಕ. ಕಷ್ಟ ಪಟ್ಟು ಮೇಲೆ ಬಂದವರು. ಕೆಲವನ್ನು ಪ್ರೀತಿಸುವ ಮಂದಿ ನನ್ನ ದೃಷ್ಠಿಯಲ್ಲಿ ನಾಯಕ. ಇತ್ತೀಚೆಗೆ ಕನ್ನಡ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ ಖುಷಿಯ ಸಂಗತಿ.- ಅನಂತ್ ನಾಗ್, ಹಿರಿಯ ನಟ,
ಕೋಪ ಸುಲಭ
ಕೋಪ ಮಾಡಿಕೊಳ್ಳುವುದು ಸುಲಭ, ಆದರೆ ಮತ್ತೊಬ್ಬರ ಮುಖದಲ್ಲಿ ನಗು ಮೂಡಿಸುವುದು ಕಷ್ಟ, ಹಾಗೆ ನೋಡಿದರೆ ಅಳು ಕೂಡ ಬೇಗ ಬರಲಿದೆ. ಇನ್ನುಳಿದಂತೆ ಉಳಿದ ಭಾವಗಳನ್ನು ಅನುಕರಣೆ ಮಾಡಲು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ನನ್ನ ಸಿನಿಮಾಯಾನದಲ್ಲಿ 95 ಪ್ರಮುಖ ಕಲಾವಿದರ ಜೊತೆ ನಟಿಸಿದ್ದೇನೆ ಅದರ ಪಟ್ಟಿ ಮಾಡಿದ್ದೇನೆ. ಅವರಿಲ್ಲ ಎನ್ನುವುದನ್ನು ತಿಳಿದು ಖಿನ್ನತೆಗೂ ಒಳಗಾಗಿದ್ದೆ. ಹೀಗಾಗಿ ಪಟ್ಟಿ ಮಾಡುವುದನ್ನೂ ಬಿಟ್ಟೆ ಎಂದರು ಹಿರಿಯ ನಟ ಅನಂತ್ ನಾಗ್.
ಪತ್ನಿ ನನ್ನ ಬೆನ್ನೆಲುಬಿಗಿಂತ ಹೆಚ್ಚು
ಪತ್ನಿ ಗಾಯತ್ರಿ ನನ್ನ ಬೆನ್ನೆಲುಬಿಗಿಂತ ಹೆಚ್ಚು. ಆಕೆಯ ಬೆಂಬಲದಿಂದ ತಾವು 50 ವರ್ಷಗಳು ಚಿತ್ರರಂಗದಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಅತ್ಯುತ್ತಮ ಜೀವನ ಸಂಗಾತಿಯಾಗಿ ನನ್ನನ್ನು ಮುನ್ನೆಡೆಸುತ್ತಿದ್ದಾರೆ. ಜೊತೆಗೆ ನನ್ನ ಮೇಲೆ ನಂಬಿಕೆ ಇಟ್ಟು ಕೆಲಸ ಕೊಟ್ಟ ನಿರ್ದೇಶಕರು, ನಿರ್ಮಾಪಕರು, ಸಂಭಾಷಣೆಕಾರರ ಪರಿಶ್ರಮ ಕಾರಣ. ಪ್ರತಿಯೊಬ್ಬರಿಗೂ ಅಬಾರಿ ಎಂದರು ಅನಂತ್ ನಾಗ್.
ಜೀವಂತ ಜ್ವಾಲಮುಖಿ
ಪತಿ ಅನಂತ್ ನಾಗ್ ಅವರು ಜೀವಂತ ಜ್ವಾಲಾಮುಖಿ. ಅವರಿಗೆ ಕೋಪ ಬೇಗ ಬರುತ್ತದೆ. ಅಡುಗೆ ಸರಿ ಇರಲಿಲ್ಲ ಎಂದರೆ, ಮನೆಯಲ್ಲಿ ಪುಸ್ತಕ ಸೇರಿದಂತೆ ಕೆಲ ವಸ್ತುಗಳ ಒಂದು ಕಡೆ ಇಲ್ಲದಿದ್ದರೆ ಕೋಪ ಬೇಗ ಬಂದು ಬಿಡುತ್ತದೆ. ಅವರು ಒಪ್ಪಲಿ ಬಿಡಲಿ, ಕೋಪ ಜಾಸ್ತಿ. _ ಗಾಯತ್ರಿ ಅನಂತ್ ನಾಗ್, ಪತ್ನಿ