5 ದಿನದಲ್ಲಿ ಕ್ರಮ ಕೈಗೊಳ್ಳಿ ಇಲ್ದಿದ್ರೆ ಹೋರಾಟ; ಉಮೇಶ ಮುದ್ನಾಳ ಎಚ್ಚರಿಕೆ

ಯಾದಗಿರಿ; ಮಾ. 28- ಹೋತಪೇಟೆ ನಲ್ಲಿ 3 ಅನಪೂರದಲ್ಲಿ 3 ಜನ ಒಟ್ಟು ಆರು ಜನ ಮೃತಪಟ್ಟಿದ್ದರೂ ಇನ್ನು ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ ಡಿಸಿ ಭವನದಿಂದ ಕೇವಲ 2 ಕಿ.ಮೀ. ಅಂತರದಲ್ಲಿರುವ ಮುದ್ನಾಳ ಗ್ರಾಮದಲ್ಲಿ ಚರಂಡಿ ತುಂಬಿ ಸಿಸಿ ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ಕ್ರಮ ಕೈಗೊಳ್ಳದೇ ಇರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕೂಡಲೇ ಚರಂಡಿ ಸ್ವಚ್ಛಗೊಳಿಸಿ ಬ್ಲಿಚಿಂಗ್ ಪೌಡರ್ ಸಿಂಪಡಿಸಿ ಕಾಲರಾದಂತಹ ಸಾಂಕ್ರಾಮಿಕ ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮತ್ತು ಚರಂಡಿಯನ್ನು ಪೂರ್ತಿಗೊಳಿಸಬೇಕು. ಚರಂಡಿ ಇಲ್ಲದೇ ಇರುವ ಕಾರಣ ಖಾಸಗಿ ಜಮೀನುಗಳಲ್ಲಿ ಚರಂಡಿ ನೀರು ಹರಿದು ಬಿಸಿಲಿಗೆ ಗಬ್ಬೆದ್ದು ನಾರುತ್ತಿದ್ದು ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದ್ದಿದೆ.

ಇದಲ್ಲದೇ ಬಿಸಿಲಿನ ತಾಪದಿಂದಾಗಿ ಈ ಹೊಲಸು ನೀರಿನಲ್ಲಿಯೇ ಎಮ್ಮೆ ಮತ್ತು ನಾಯಿಗಳು ಮಲಗಿಕೊಂಡು ತಗ್ಗು ಗುಂಡಿಗಳು ಸೃಷ್ಟಿಯಾಗಿ ಅವು ಸೊಳ್ಳೆ ಉತ್ಪನ್ನ ಕೇಂದ್ರಗಳಾಗಿ ಮಾರ್ಪಡುತ್ತಿದೆ. ಸಂಜೆ ಯಾದ ನಂತರ ಸೊಳ್ಳೆಗಳು ಜನ ಜಾನುವಾರುಗಳಿಗೆ ಮುಕ್ಕರಿಕೊಂಡು ರಕ್ತ ಹೀರುತ್ತಿವೆ. ಜಾನುವಾರುಗಳ ಕಾಲುಗಳಲ್ಲಿ ರಕ್ತ ಸೋರುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜೆಇ, ತಾಪಂ ಇಓ, ಜಿಪಂ ಸಿಇಓ ಡಿಸಿ ಅವರು ಮುಂಜಾಗೃತ ಕ್ರಮ ಕೈಗೊಳ್ಳದೇ ಇರುವ ಕಾರಣ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ ಅನಪೂರ, ಹೋತಪೇಟೆಗಳಲ್ಲಿ ಪೈಪ್ ಒಡೆದು ಇದೇ ಕಲುಷಿತ ನೀರಿನ ಕಾರಣದಿಂದಲೇ ಆರು ಜನರ ಸಾವು ಸಂಭವಿಸಿತ್ತು ಎಂಬುದನ್ನು ನೆನಪಿಸಿಕೊಳ್ಳಬೆಕು ಎಂದು ಅವರು ಒತ್ತಾಯಿಸಿದ್ದಾರೆ.

ಆದ್ದರಿಂದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಕ್ಕೆ ಭೇಟಿ ನೀಡಿ ಚರಂಡಿ ಇಲ್ಲದ ಕಾರಣ ನೀರು ಹರಿದು ಗಿಡಗಂಟಿಗಳು ಬೆಳೆದು ವಿಷಜಂತುಗಳ ತಾಣವಾಗಿದೆ ಇದರಿಂದ ಮಕ್ಕಳು ಮರಿಗಳಿಗೆ ವೃದ್ಧರಿಗೆ ಅಪಾಯವಾಗುವ ಸಂಭವ ಇದೆ ಎಂದು ಅವರು ತಿಳಿಸಿದ್ದು ಕೂಡಲೇ 5 ದಿನಗಳಲ್ಲಿ ಕ್ರಮ ಜರುಗಿಸಬೆಕು ಇಲ್ಲದಿದ್ದಲ್ಲಿ ಎಮ್ಮೆಯ ಕೊರಳಿಗೆ ದಪ್ಪ ಚರ್ಮದ ಅಧಿಕಾರಿಗಳ ಭಾವಚಿತ್ರ ಕಟ್ಟಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.