5 ದಿನಗಳು ರಾಜ್ಯದಲ್ಲಿ ಭಾರೀ ಮಳೆ

ಬೆಂಗಳೂರು,ಮೇ ೨೯-ತೌಕ್ತೆ ಹಾಗೂ ಯಾಸ್ ಚಂಡಮಾರುತದ ಪರಿಣಾಮದಿಂದಾಗಿ ಮುಂಗಾರು ನಾಲ್ಕೈದು ದಿನಗಳ ಮುನ್ನವೇ ಪ್ರವೇಶಿಸುವುದರಿಂದ ರಾಜ್ಯದಲ್ಲಿ ಜೂನ್ ೨ರವರೆಗೂ ಅಧಿಕ ಮಳೆಯಾಗಲಿದೆ.
ರಾಜ್ಯದ ಹಲವೆಡೆ ಇಂದಿನಿಂದ ಎರಡು ದಿನಗಳ ಕಾಲ ಮೋಡಕವಿದ ವಾತಾವರಣವಿರಲಿದ್ದು, ಒಣಹವೆ ಮುಂದುವರೆಯಲಿದೆ, ಮೇ ೩೧ ರಿಂದ ಮೂರುದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜೂನ್ ೨ರವರೆಗೂ ನಿರಂತರ ಮಳೆಯಾಗಲಿದರೆ ಬಾಗಲಕೋಟೆ, ಬೆಳಗಾವಿ, ಹಾವೇರಿ, ಕೊಪ್ಪಳ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಒಣಹವೆ ಮುಂದುವರೆಯಲಿದೆ.
ಯಾಸ್ ಚಂಡ ಮಾರುತದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ಮಾನ್ಸೂನ್ ಗಾಳಿಯ ತೀವ್ರತೆ ಹೆಚ್ಚಾಗಿದೆ. ಮುಂದಿನ ವಾರ ಕೇರಳದಲ್ಲಿ ಮಾನ್ಸೂನ್ ಪ್ರವೇಶಿಸಲಿದ್ದು, ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಳೆದ ಮೇ.೨೭ರಂದು ಕೇರಳದ ಕಾಯಂಕುಳಂ,ಅಲಪ್ಪುಳದಲ್ಲಿ ೯ ಸೆಂಟಿ ಮೀಟರ್ ನೆಡುಮಂಗದ್ ಮತ್ತು ಥಿರುವಿಲ್ಲಾದಲ್ಲಿ ೮ ಸೆಂ.ಮೀ ಮಳೆ, ಪೀರ್ಮಡೆ ಮತ್ತು ಕುಮಾರಕಮ್ ಪ್ರದೇಶದಲ್ಲಿ ೮ ಸೆಂ.ಮೀ ಮಳೆ ಸುರಿದಿದೆ. ಒಡಿಶಾದ ಮಾಯೂರ್ ಬಂಜ್ ೨೮ ಸೆಂ.ಮೀ, ಕಿಯೊಂಜಿಘರ್ ೨೭ ಸೆಂ.ಮೀ, ಸುಂದರ್ ಘರ್ ೨೧ ಸೆಂ.ಮೀ, ಮಳೆಯಾಗಿದೆ. ಜಾರ್ಖಂಡ ಪಶ್ಚಿಮ ಸಿಂಘುಮ್ ೨೧ ಸೆಂ.ಮೀ ಮತ್ತು ರಾಂಚಿಯಲ್ಲಿ ೧೮ ಸೆಂಟಿ ಮೀಟರ್ ಮಳೆ ಸುರಿದಿದೆ.
ಮೂರು ದಿನ ಅಧಿಕ ಮಳೆ:
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.
ಮುಂಗಾರು ಪ್ರವೇಶ:
ನೈಋತ್ಯ ಮಾನ್ಸೂನ್ ಮಾರುತಗಳು ನೈಋತ್ಯ ಮತ್ತು ಪೂರ್ವಕೇಂದ್ರದ ಬಂಗಾಳ ಕೊಲ್ಲಿಯತ್ತ ಸಾಗಿದ್ದು, ಮೇ ೩೧ರ ಹೊತ್ತಿಗೆ ಕೇರಳ ಪ್ರವೇಶ ಮಾಡಲಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯಕ್ಕೆ ಮುಂಗಾರು ಪ್ರವೇಶ
ಮುಂಗಾರು ಮಳೆ ಸುರಿಸುವ ನೈಋ?ತ್ಯ ಮಾನ್ಸೂನ್ ಮಾರುತಗಳು ಮೇ ೩೧ರಂದು ಕೇರಳ ಪ್ರವೇಶಿಸಲಿದ್ದು, ಜೂನ್ ಮೊದಲ ವಾರದ ಕೊನೆಗೆ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಸೃಷ್ಟಿಯಾದ ೨ ಚಂಡಮಾರುತಗಳೇ ಮಾನ್ಸೂನ್ ಮಾರುತಗಳ ಈ ಚಲನೆಗೆ ಕಾರಣ ಎನ್ನಲಾಗಿದೆ.
ಚಲನೆಯಲ್ಲಿ ಪರಿಣಾಮ:
ಕಳೆದ ವಾರವಷ್ಟೇ ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಹಲವು ರಾಜ್ಯಗಳು ನಲುಗಿ ಹೋಗಿದ್ದವು. ಇದೀಗ ಅದರ ಬೆನ್ನಲ್ಲೇ ಯಾಸ್ ಚಂಡಮಾರುತ ಕೂಡ ಅಪ್ಪಳಿಸಿದೆ. ಹೀಗಾಗಿ ಮಾನ್ಸೂನ್ ಮಾರುತಗಳ ಚಲನೆಯಲ್ಲಿ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ಮಾಲ್ಡೀವ್ಸ್-ಕೊಮೊರಿನ್ ಪ್ರದೇಶದ ಕೆಲವು ಭಾಗಗಳಲ್ಲಿ ಮಾನ್ಸೂನ್ ಈಗಾಗಲೇ ಪ್ರವೇಶಿಸಿದೆ. ಪಶ್ಚಿಮ ಬಂಗಾಳದ ನೈಋತ್ಯ ಮತ್ತು ಪೂರ್ವ ಕೇಂದ್ರ, ಆಗ್ನೇಯ ಕೊಲ್ಲಿಯ ಹೆಚ್ಚಿನ ಭಾಗ ಹಾಗೂ ಪಶ್ಚಿಮ ಕೇಂದ್ರ ಕೊಲ್ಲಿಯ ಕೆಲವು ಭಾಗಗಳಿಗೆ ಗುರುವಾರದ ವೇಳೆಗೆ ಮಾನ್ಸೂನ್ ಪ್ರವೇಶಿಸಿದೆ.
ಮೋಡದ ವಾತಾವರಣ:
ನಗರದಲ್ಲಿ ಮೋಡಕವಿದ ವಾತಾವರಣ ಇರಲಿದ್ದು ೩೨ ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ೨೧ ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್‌ಎಎಲ್‌ನಲ್ಲಿ ೩೧.೫ ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ೧೮.೫ ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ ೩೦.೬ ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ೨೦.೪ ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ ೩೧.೫ ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ೨೦.೦ ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.