5 ಜಿಲ್ಲೆಗಳಲ್ಲಿ ಗ್ರಾಮಸೇವಾ ಯೋಜನೆ ಆರಂಭ;ಸಿಎಂ

ಬೆಂಗಳೂರು,ಸೆ.೨೩- ಮುಂಬರುವ ದಿನಗಳಲ್ಲಿ ಗ್ರಾಮಪಂಚಾಯ್ತಿಗಳ ಸಬಲೀಕರಣ ಮಾಡುವ ಚಿಂತನೆ ನಡೆಸಲಾಗಿದ್ದು, ಜ. ೨೬ ಗಣರಾಜ್ಯೋತ್ಸವ ದಿನದಂದು ೫ ಜಿಲ್ಲೆಗಳಲ್ಲಿ ಗ್ರಾಮಸೇವಾ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಜನರಿಗೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಎಲ್ಲ ಸೇವೆಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾಮಪಂಚಾಯ್ತಿಯಲ್ಲೇ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ೭೫೦ ಗ್ರಾಮಪಂಚಾಯ್ತಿಗಳಲ್ಲಿ ಅಮೃತ ಗ್ರಾಮಪಂಚಾಯ್ತಿ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಪಂಚಾಯ್ತಿಗಳ ಸಬಲೀಕರಣ ೫ ಜಿಲ್ಲೆಗಳಲ್ಲಿ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಇದನ್ನು ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.
ಅಭಿವೃದ್ಧಿ ಜನರ ಸುತ್ತ ಆಗಬೇಕು. ಜನರು ಅಭಿವೃದ್ಧಿ ಸುತ್ತ ಸುತ್ತುವಂತಾಗಬಾರದು. ಈ ಹಿನ್ನೆಲೆಯಲ್ಲಿ ಗ್ರಾಮಪಂಚಾಯ್ತಿಗಳು ವಿವಿಧ ಸೇವೆಗಳನ್ನು ಒದಗಿಸುವ ಗ್ರಾಮಸೇವಾ ಸಂಸ್ಥೆಯಾಗಬೇಕು ಎಂದು ಹೇಳಿದರು.
ತಾಲ್ಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಅಗತ್ಯ ಸೇವೆಗಳಿಗಾಗಿ ಅಲೆದಾಡುವುದನ್ನು ತಪ್ಪಿಸಲು ಗ್ರಾಮಪಂಚಾಯ್ತಿ ಕಚೇರಿಗೆ ತೆರಳಿದರೆ ಅಲ್ಲಿ ಅವರಿಗೆ ಎಲ್ಲ ರೀತಿಯ ಸೌಲಭ್ಯ ಸಿಗುವಂತಾಗಬೇಕು. ಇದಕ್ಕಾಗಿ ೬ ಗ್ರಾಮ ಸೇವಕರನ್ನು ನಿಯೋಜಿಸಿ ಜನರ ಮನೆ ಬಾಗಿಲಿಗೆ ಸೇವೆಯನ್ನು ತಲುಪಿಸಲಾಗುವುದು ಎಂದು ಹೇಳಿದರು.
ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಗ್ರಾಮಸ್ವರಾಜ್ಯ ಕನಸು ನನಸಾಗಬೇಕಾದರೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ರಸ್ತೆಗಳು ಅಭಿವೃದ್ಧಿಯಾಗಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗ ಮಾತ್ರ ಗ್ರಾಮಸ್ವರಾಜ್ಯ ಕನಸು ನನಸಾಗಲಿದೆ ಎಂದರು.
ಗ್ರಾಮೀಣ ಭಾಗದ ತಲಾದಾಯ ಶೇ. ೨೫ ರಿಂದ ೩೦ ರಷ್ಟು ಜನಸಂಖ್ಯೆ ಕೊಡುಗೆ ಹೆಚ್ಚಿದೆ. ಉಳಿದ ಜನರು ಹೆಚ್ಚಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದರ ಜತೆಗೆ ರಾಜ್ಯದ ತಲಾದಾಯ ಹೆಚ್ಚಳಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.
೭೫೦ ಗ್ರಾಮ ಪಂಚಾಯ್ತಿಗಳ ಸರ್ವಾಂಗೀಣ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಪ್ರತಿ ಪಂಚಾಯ್ತಿಗೆ ಸರಾಸರಿ ೩ ಕೋಟಿ ರೂ.ಗಳಂತೆ ೨,೩೦೦ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಮಾ. ೩೧ರೊಳಗೆ ಯೋಜನೆ ಪೂರ್ಣಗೊಳಿಸಿದ ಪಂಚಾಯ್ತಿಗಳಿಗೆ ೨೫ ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣಹೆಗಡೆ ಹಾಗೂ ಅಂದು ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್‌ನಸೀರ್‌ಸಾಬ್ ರಾಜ್ಯದಲ್ಲಿ ಪಂಚಾಯ್ತ್ ರಾಜ್ ವ್ಯವಸ್ಥೆಯ ರೂವಾರಿಗಳು ಎಂದು ಸ್ಮರಿಸಿದರು.
ಇದಕ್ಕೂ ಮುನ್ನಾ ಅಮೃತ್ ಗ್ರಾಮಪಂಚಾಯ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ಸಿಂಗ್, ಎಲ್ಲ ಗ್ರಾಮಪಂಚಾಯ್ತಿಗಳು ೨೦೨೪ರೊಳಗೆ ಡಿಜಿಟಲ್ ಸಂಪರ್ಕ ಹೊಂದಿರಬೇಕು. ರಾಜ್ಯದಲ್ಲೂ ಈ ಯೋಜನೆಯನ್ನು ಆದ್ಯತೆ ಮೇರೆಗೆ ಜಾರಿಗೊಳಿಸುವಂತೆ ಸೂಚಿಸಿದರು.
ಅ. ೨ ರಂದು ದೇಶಾದ್ಯಂತ ಗ್ರಾಮಪಮಚಾಯ್ತಿಗಳು ಗ್ರಾಮ ಸಭೆ ನಡೆಸಿ ನನ್ನ ಗ್ರಾಮ, ನನ್ನ ಪರಂಪರೆ ಎಂಬ ಘೋಷಣೆಯಡಿ ತಮ್ಮ ಗ್ರಾಮಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರು, ವಿಧ್ವಾಂಸರು, ಹಿರಿಯರೂ ಸೇರಿದಂತೆ ಇತರ ಗಣ್ಯರನ್ನು ಸ್ಮರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಅ. ೧ ರಿಂದ ೧೫ರೊಳಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಎಸ್.ಟಿ ಸೋಮಶೇಖರ್, ಮುನಿರತ್ನ, ಬಿ.ಸಿ ನಾಗೇಶ್ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಬೇಡಿಕೆ ಈಡೇರಿಕೆಗೆ ಮನವಿ
ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡಿದ್ದ ೧೩ ಕೋಟಿ ಮಾನವ ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆ ನರೇಗಾ ದಿನಗಳನ್ನು ೨೦ ಕೋಟಿಗೆ ಹೆಚ್ಚಳ ಮಾಡಬೇಕೂ ಸೇರಿದಂತೆ ೧೭೦೦ ಕಿ.ಮೀ ರಸ್ತೆ ನಿರ್ಮಾಣ ಹಾಗೂ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಶಾಲೆಗಳ ದುರಸ್ತಿಗೂ ಅವಕಾಶ
ಕಲ್ಪಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಸಚಿವ ಈಶ್ವರಪ್ಪ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಈ ವೇಳೆ ಸಿಂಗ್ ಅವರಿಗೆ ಈ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ೭೫೦ ಗ್ರಾಮಪಂಚಾಯ್ತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ, ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಡಿಜಿಟಲ್ ಲೈಬ್ರೆರಿ, ಶಾಲೆಗಳು ಮತ್ತು ಅಂಗನವಾಡಿಗಳ ನಿರ್ಮಾಣ, ಶಾಲೆಗಳಲ್ಲಿ ಆಟದ ಮೈದಾನದ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.