5 ಕೋಟಿ ರೂ. ವೆಚ್ಚದಲ್ಲಿ ಸಾರಿಗೆ ಕಚೇರಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

ಬೀದರ ನ. 21: ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಸವಕಲ್ಯಾಣ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡಕ್ಕೆ ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಗ್ರಾಮದಲ್ಲಿ ನವೆಂಬರ್ 20ರಂದು ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಸವದಿ ಅವರು, ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಅತಿವೃಷ್ಟಿ ಮತ್ತು ಕೋವಿಡ್-19 ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ನಾವು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಒತ್ತು ಕೊಟ್ಟು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಭಾಗದಲ್ಲಿ ಹೊಸ ಬಸ್ಸಗಳು ಸಿಗಬೇಕು ಎಂದು ಸಂಸದರಾದ ಭಗವಂತ ಖೂಬಾ ಅವರು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದರು. ಈ ವಿಷಯವನ್ನು ನಾನು ಮುಖ್ಯಮಂತ್ರಿ ಅವರಿಗೆ ತಿಳಿಸಿದಾಗ 4000 ಬಸ್ಸಗಳನ್ನು ಖರೀದಿ ಮಾಡಲಿಕ್ಕೆ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿತ್ತು.
ಕೊರೋನಾ ಎದುರಾಗಿದ್ದರಿಂದ ಸರ್ಕಾರದ ರಾಜಸ್ವಕ್ಕೆ ಈಗ ಕೇವಲ ಶೇ.37ರಷ್ಟು ಮಾತ್ರ ಹಣ ಬಂದಿದೆ. ಇಂತಹ ಸಮಸ್ಯೆಗಳು ಎದುರಾಗದಿದ್ದರೆ 4000 ಬಸ್ಸಗಳನ್ನು ಖರೀದಿ ಮಾಡಿ ಈ ಕಲ್ಯಾಣ ಕರ್ನಾಟಕ ಭಾಗಕ್ಕೆ 1000 ಸಾವಿರ ಹೊಸ ಬಸ್ಸಗಳನ್ನು ಕೊಡುವಂತಹ ಗುರಿ ಹೊಂದಲಾಗಿತ್ತು ಎಂದರು. ಈ ಗುರಿಯನ್ನು ಮರೆಯದೇ ಈ ಭಾಗಕ್ಕೆ 1000 ಬಸ್ಸಗಳನ್ನು ಕೊಡಲಾಗುವುದು ಎಂದು ತಿಳಿಸಿದರು.
ಬೇರೆ ಬೇರೆ ರಾಜ್ಯದಲ್ಲಿ ಸರ್ಕಾರಿ ನೌಕರರ ಸಂಬಳದಲ್ಲಿ ಶೇ.30ರಷ್ಟು ಕಡಿತಗೊಳಿಸಿದ ಉದಾಹರಣೆಗಳಿವೆ. ಆದರೆ, ಕರ್ನಾಟಕದಲ್ಲಿ ನಮ್ಮ ರಾಜ್ಯ ಸರ್ಕಾರ ಯಾವುದೇ ನೌಕರರ ಸಂಬಳದಲ್ಲಿ ಕಡಿತಗೊಳಿಸಿಲ್ಲ ಎಂದರು.
ರಾಜ್ಯದಲ್ಲಿರುವ ನಾಲ್ಕು ನಿಗಮಗಳಲ್ಲಿ 1 ಲಕ್ಷದ 30 ಸಾವಿರ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಸ್ಸಗಳಲ್ಲಿ ಪ್ರತಿ ದಿನ 2 ಕೋಟಿಯಷ್ಟು ಜನರು ಸಂಚರಿಸುತ್ತಿದ್ದರು. ಆದರೆ, ಈ ಕೋರನಾ ಬಂದ ಮೇಲೆ ನಾಲ್ಕೂ ನಿಗಮ ಸೇರಿ ಪ್ರತಿ ದಿನ ಕೇವಲ 70 ಸಾವಿರ ಜನರು ಮಾತ್ರ ಸಂಚರಿಸುತ್ತಿದ್ಧಾರೆ. ಇವರಿಂದ ಬರುವ ಆದಾಯಕ್ಕೆ ಮತ್ತು ಇಂಧನಕ್ಕೆ ಸರಿ ಹೋಗುತ್ತಿದೆ. ಆದರೂ ಎಲ್ಲ ನೌಕರರ ಸಂಬಳವನ್ನು ಸರ್ಕಾರದಿಂದಲೇ ಕೊಟ್ಟಿದ್ದೇವೆ. ಅನೇಕ ರಾಜ್ಯಗಳಲ್ಲಿ ಸಂಬಳ ಕಡಿತ ಮಾಡಿದ್ದರೂ ನಾವು ಕಡಿತ ಮಾಡಿಲ್ಲ. ಅವರು ಶ್ರಮಿಕರು ಎಂದು ತಿಳಿದು ಅವರಿಗೆ ನಾವು 1500 ಕೋಟಿಯಷ್ಟು ಹಣವನ್ನು ಸರ್ಕಾರದಿಂದ ಪಡೆದುಕೊಂಡು ಸಾರಿಗೆ ಇಲಾಖೆಯ ಎಲ್ಲ ನೌಕರರು ಮತ್ತು ಸಿಬ್ಬಂದಿಗೆ ನೀಡಿದ್ದೇವೆ ಎಂದರು. ಇಂತಹ ಕಷ್ಟದ ಸಂದರ್ಭದಲ್ಲು ಸಾರಿಗೆ ಇಲಾಖೆಯನ್ನು ಸದೃಢಗೊಳಿಸಲು, ಇದನ್ನು ಲಾಭದಾಯಕದ ಕಡೆಗೆ ಒಯ್ಯಲು ಪ್ರಯತ್ನಿಸಲಾಗುತ್ತಿದೆ. ಆದರೆ, ಕರೋನಾ ಮಹಾಮಾರಿಯಿಂದ ನಮಗೆ ತೊಂದರೆಯಾಗುತ್ತಿದೆ ಎಂದರು.
ಚಾಲನಾ ತರಬೇತಿ ಪಥ ನಿರ್ಮಾಣಕ್ಕೆ ಒತ್ತು: ಈಗಾಗಲೇ ಕಲಬುರಗಿಯಲ್ಲಿ ಒಂದು ಚಾಲನಾ ತರಬೇತಿ ಪಥವನ್ನು ಉದ್ಘಾಟಿಸಿದ್ದೇವೆ. ಕೊಪ್ಪಳ ಜಿಲ್ಲೆಯಲ್ಲಿ ಕೂಡ ಸುಮಾರು 15 ಕೋಟಿ ರೂ.ಗಳಲ್ಲಿ ಮಂಜೂರಾತಿ ಮಾಡಿಕೊಂಡು ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆಯನ್ನು ಮಾಡುತ್ತೇವೆ ಎಂದು ತಿಳಿಸಿದ ಸವದಿ ಅವರು, ಬೀದರ ಜಿಲ್ಲೆ ಗಡಿ ಜಿಲ್ಲೆ ಎಂದು ಪರಿಗಣಿಸಿ ಆದ್ಯತೆಯ ಮೇರೆಗೆ ಇಲ್ಲಿ ಕೂಡ ಚಾಲನಾ ತರಬೇತಿ ಪಥ ನಿರ್ಮಾಣಕ್ಕೆ ಒತ್ತು ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಭಗವಂತ ಖೂಬಾ ಅವರು ಮಾತನಾಡಿ, ತಮ್ಮ ಕೆಲಸ ಕಾರ್ಯಗಳ ಮೂಲಕ ಮಾನ್ಯರಾದ ಸವದಿ ಅವರು ಕರ್ನಾಟಕದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಹಲವಾರು ಸವಾಲುಗಳ ಮಧ್ಯೆಯೇ ಸಾರಿಗೆ ಇಲಾಖೆಯನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಎಲ್ಲರಿಗೂ ಉತ್ತಮ ಸಾರಿಗೆ ಸೇವೆ ಸಿಗಬೇಕು ಎಂದು ತಿಳಿದು ನನೆಗುದಿಗೆ ಬಿದ್ದ ಎಲ್ಲ ಯೋಜನೆಗಳಿಗೆ ಪುನರ್ರಚಾಲನೆ ನೀಡಿ ಯೋಜನೆಗಳ ತೀವ್ರ ಅನುಷ್ಠಾನಕ್ಕೆ ಒತ್ತು ಕೊಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ಲಾರಿ ಓನರ್ ಅಸೋಸಿಯೇಶನ್ ಅವರು ಮುಂದಿಟ್ಟಿರುವ ಬೇಡಿಕೆಗೆ ಸ್ಪಂದಿಸಬೇಕು. ಆರು ತಿಂಗಳ ಅವಧಿಗೆ ಲಾರಿ ಚಾಲಕರಿಗೆ ಟ್ಯಾಕ್ಸ್ ಮನ್ನಾ ಮಾಡಬೇಕು. ಪುರಸಭೆಯಾದ ಹಳ್ಳಿಖೇಡಗೆ ಒಂದು ದೊಡ್ಡ ಪ್ರಮಾಣದಲ್ಲಿ ಬಸ್ಸ ನಿಲ್ದಾಣ ನಿರ್ಮಿಸಿಕೊಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಡಾ.ಚಂದ್ರಶೇಖರ ಬಿ.ಪಾಟೀಲ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಸೇಡಂ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವಕಲ್ಯಾಣ ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ, ಜಿಲ್ಲಾ ಪಂಚಾಯತ್ ಸದಸ್ಯರಾದ ಗುಂಡುರೆಡ್ಡಿ ರಾಮಣ್ಣ ಕಮಲಾಪುರೆ, ಮುಖಂಡರಾದ ಮಲ್ಲಿಕಾರ್ಜುನ ಖೂಬಾ, ಉಮಾಕಾಂತ ನಾಗಮಾರಪಳ್ಳಿ, ಬಾಬು ವಾಲಿ, ಅಪರ ಸಾರಿಗೆ ಆಯುಕ್ತರಾದ ಮಾರುತಿ ಸಾಂಬ್ರಾಣಿ, ಶಿವರಾಜ ಬಿ ಪಾಟೀಲ, ಬಿ.ಪಿ.ಉಮಾಶಂಕರ, ಬಸವಕಲ್ಯಾಣ ಸಹಾಯಕ ಆಯುಕ್ತರಾದ ಭುವನೇಶ ಪಾಟೀಲ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ, ತಹಸೀಲ್ದಾರರಾದ ಸಾವಿತ್ರಿ ಸಲಗರ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜಿ.ಕೆ.ಬಿರಾದಾರ, ಮುಖ್ಯ ಅಭಿಯಂತರರಾದ ಆರ್.ಶಿವಸ್ವಾಮಿ, ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹ್ಮದ್ ಜಾಫರ್ ಸಾಧಿಕ್ ಉಪಸ್ಥಿತರಿದ್ದರು. ಜಂಟಿ ಸಾರಿಗೆ ಆಯುಕ್ತರಾದ ಸಿ.ಮಲ್ಲಿಕಾರ್ಜುನ ಅವರು ಸ್ವಾಗತಿಸಿದರು.