5 ಕೋಟಿ ರೂ. ಬಡದಾಳ-ಬಳೂರ್ಗಿ ರಸ್ತೆ ಕಾಮಗಾರಿಗೆ ಅಡಿಗಲ್ಲು ಸಮಾರಂಭ

ಅಫಜಲಪುರ:ಮಾ.16: ಬಡದಾಳ ಗ್ರಾಮದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಹಿಂದೆಯೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಮುಂದೆಯೂ ಸಹ ಗ್ರಾಮಕ್ಕೆ ಬೇಕಾಗುವ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸದಾ ಸಿದ್ಧನಿದ್ದೇನೆ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.

ತಾಲೂಕಿನ ಬಡದಾಳ ಗ್ರಾಮದ ಹನುಮಾನ ದೇವಸ್ಥಾನದಿಂದ ಬಳೂರ್ಗಿ ಮುಖ್ಯರಸ್ತೆವರೆಗೆ 2022-23ನೇ ಸಾಲಿನ ಕೆಕೆಆರ್ ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಬಡದಾಳ ಗ್ರಾಮಕ್ಕೆ ಈ ಮೊದಲು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ರಸ್ತೆ ನಿರ್ಮಾಣ ಮಾಡಿದ್ದೇನೆ. ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜೆಜೆಎಂ ಯೋಜನೆಯಲ್ಲಿ ಮನೆಮನೆಗೆ ನೀರಿನ ಪೈಪ್ ಲೈನ್ ಮಾಡಲಾಗಿದೆ. ಆದರೆ ನೀರಿನ ಕೊರತೆಯಿಂದಾಗಿ ಈ ಯೋಜನೆ ಸದ್ಯಕ್ಕೆ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಕೆರೆಗಳ ಅಭಿವೃದ್ಧಿಪಡಿಸುವ ಮೂಲಕ ನೀರಿನ ಹಾಹಾಕಾರ ತಪ್ಪಿಸಲಾಗುವುದು. ಅಲ್ಲದೇ ಗ್ರಾಮದಲ್ಲಿ ವಸತಿ ನಿಲಯ, ಸರ್ಕಾರಿ ಆಸ್ಪತ್ರೆ ಹೀಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಭೀಮಾ ನದಿ ದಡದಲ್ಲಿರುವ ರೈತರು ಸಾವಿರಾರು ಟನ್ ಕಬ್ಬು ಬೆಳೆದು ಆರ್ಥಿಕವಾಗಿ ಸದೃಢವಾಗಿದ್ದಾರೆ.ಆದರೆ ಈ ಭಾಗದಲ್ಲಿ ನೀರಿನ ಕೊರತೆ ಸಾಕಷ್ಟು ಇರುವುದರಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 200 ಕೋಟಿ ವೆಚ್ಚದಲ್ಲಿ ಕೆರೆಗಳ ನಿರ್ಮಾಣ, ಅಭಿವೃದ್ಧಿ ಪಡಿಸುವ ಯೋಜನೆ ಬರಲಿದೆ.

ಕ್ಷೇತ್ರದ ಮತದಾರರು ನನಗೆ ಚುನಾವಣೆಯಲ್ಲಿ ಪುನರಾಯ್ಕೆ ಮಾಡಿದ್ದಾರೆ. ಇನ್ನೂ ನನಗೆ 4 ವರ್ಷಗಳ ಕಾಲಾವಕಾಶ ಇದ್ದು, ನನ್ನ ಶಕ್ತಿ ಮೀರಿ ಅಭಿವೃದ್ಧಿ ಕೆಲಸಗಳಿಗೆ ಶ್ರಮಿಸುತ್ತೇನೆ. ಹೀಗಾಗಿ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ, ಲೋಕೋಪಯೋಗಿ ಇಲಾಖೆಯ ಎಇಇ ಲಕ್ಷ್ಮಿಕಾಂತ ಬಿರಾದಾರ,
ತಾಪಂ ಇಓ ಈರಣ್ಣ ಕೌಲಗಿ, ಪಿ.ಎಸ್.ಐ ಮಹೆಬೂಬ ಅಲಿ, ಜಿಪಂ ಮಾಜಿ ಸದಸ್ಯ ಮತೀನ ಪಟೇಲ್, ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್, ಚಂದ್ರಶೇಖರ ಕರಜಗಿ, ಶರಣು ಕುಂಬಾರ, ಚಿಂಟು ಪಟೇಲ್, ರಮೇಶ ಪಾಟೀಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


ಬಡದಾಳ ಗ್ರಾಮದಿಂದ ಬಳೂರ್ಗಿ ಮುಖ್ಯ ರಸ್ತೆವರೆಗಿನ ಕಾಮಗಾರಿಗೆ ಎರಡು ತಿಂಗಳ ಹಿಂದಷ್ಟೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆದರೆ ಕೊಳ್ಳೆ ಹೊಡೆದು ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಕೆಲಸ ನೀಡಬಾರದು ಎಂಬ ಕಾರಣಕ್ಕೆ ಗುಣಮಟ್ಟದ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಕೆಲಸ ನೀಡುವ ಉದ್ದೇಶದಿಂದ ಸ್ವಲ್ಪ ವಿಳಂಬವಾಗಿದೆ ಅಷ್ಟೇ. ಇಷ್ಟೆಲ್ಲ ಗೊತ್ತಿದ್ದರೂ ಸಹ ಕೆಲವು ಜನ ರಸ್ತೆ ನಿರ್ಮಾಣ ಮಾಡಬೇಕೆಂದು ಧರಣಿಗೆ ಕುಳಿತುಕೊಂಡಿರುವುದು ಯಾವ ಉದ್ದೇಶಕ್ಕಾಗಿ ಎಂಬುದು ನನಗೆ ಗೊತ್ತಿಲ್ಲ. ಧರಣಿಗೆ ಕುಳಿತವರಿಂದಲೇ ರಸ್ತೆ ಕಾಮಗಾರಿಗೆ ಚಾಲನೆ ನೀಡಿಸಲು ತಹಶೀಲ್ದಾರರು ಹಾಗೂ ಇನ್ನಿತರ ಅಧಿಕಾರಿಗಳನ್ನು ಧರಣಿ ಸ್ಥಳಕ್ಕೆ ಕಳಿಸಿದರೂ ಕೂಡ ಅವರು ಯಾರು ಬಂದಿಲ್ಲ. ಹೀಗಾಗಿ ಇದರ ಹಿಂದಿನ ಉದ್ದೇಶ ನನಗೆ ಅರ್ಥವಾಗುತ್ತಿಲ್ಲ.

  • ಎಂ.ವೈ ಪಾಟೀಲ, ಶಾಸಕರು ಅಫಜಲಪುರ

ಕಳೆದ 20 ದಿನಗಳಿಂದ ಊರಿನ ರಸ್ತೆ ಸಂಪರ್ಕದ ಬೇಡಿಕೆ ಈಡೇರಿಕೆಗಾಗಿ ಧರಣಿ ಸತ್ಯಾಗ್ರಹ ಕುಳಿತ ಬಡದಾಳ ಗ್ರಾಮಸ್ಥರು ಶಾಸಕರು ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆದರು. ಆದರೆ ಧರಣಿ ಸ್ಥಳಕ್ಕೆ ಶಾಸಕರು ಆಗಮಿಸಲಿಲ್ಲ ಎಂದು ಕೆಲ ಹೊತ್ತು ಪಟ್ಟು ಹಿಡಿದು ತಮ್ಮ ಅಸಮಧಾನ ಹೊರಹಾಕಿದರು.


ಒಂದು ಗ್ರಾಮಕ್ಕೆ ಅವಶ್ಯಕವಿರುವ ಎಲ್ಲ ನೀರು, ಬೆಳಕು, ರಸ್ತೆಯನ್ನು ಶಾಸಕರು ವ್ಯವಸ್ಥಿತ ರೀತಿಯಲ್ಲಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಶಾಸಕರ ಅಭಿವೃದ್ಧಿ ಪರ ಇರುವ ನಿಲುವನ್ನು ಪೂಜ್ಯರು ವ್ಯಕ್ತಪಡಿಸಿದರು.

  • ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ತೇರಿನ ಮಠ ಬಡದಾಳ