
ಕಲಬುರಗಿ,ಏ.3-ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿ ಅಧ್ಯಕ್ಷರಾದ ಹವಾ ಮಲ್ಲಿನಾಥ ಮಹಾರಾಜ್ ನಿರಗುಡಿ ಮುತ್ಯಾ ಅವರ ನೇತೃತ್ವದಲ್ಲಿ ಏ. 5ರಂದು ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್‍ದಲ್ಲಿ ಡಾ.ಬಾಬು ಜಗಜೀವನರಾಂ ಜಯಂತಿ ಹಮ್ಮಿಕೊಳ್ಳಲಾಗಿದೆ.
ಕಳೆದ ವರ್ಷ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಪೂಜ್ಯರ ನೇತೃತ್ವದಲ್ಲಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವರಾಂ ಅವರ ಜಯಂತಿ ಆಚರಿಸಲಾಗಿ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು.
ಕಲಬುರಗಿ-ಬೀದರ್ ರಾಷ್ಟ್ರೀಯ ಹೆದ್ದಾರಿಗೆ ಹತ್ತಿಕೊಂಡಿರುವ ಮಹಾಗಾಂವ ಕ್ರಾಸ್‍ದಲ್ಲಿ ಅದ್ದೂರಿಯಾಗಿ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರ ಜಯಂತಿ ಆಚರಿಸಲು ಎಲ್ಲ ಸಿದ್ದತೆಗಳು ನಡೆದಿವೆ.
ಇದೇ ಸಂದರ್ಭದಲ್ಲಿ ನೂತನ ಮಹಾಗಾಂವ ಕಲ್ಯಾಣ ಮಂಟಪದ ಉದ್ಘಾಟನೆ ಸೈಯದ್ ಬಾಖರ್ ಶಬ್ಬೀರ ಹುಸೇನ್ ಸಾಬ ನದೀಮ ಬಾಬಾಜೀ ಅಧ್ಯಕ್ಷತೆಯಲ್ಲಿ ಹಾಗೂ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ಅವರ ಸಾನ್ನಿಧ್ಯ ದಲ್ಲಿ ನಡೆಯಲಿದೆ.
ಹಸಿರು ಕ್ರಾಂತಿಯ ನಾಯಕ ಡಾ.ಬಾಬು ಜಗಜೀವನರಾಂ ಅವರ ಜಯಂತಿಯಲ್ಲಿ ದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ ಕೋರಿದ್ದಾರೆ.