5ಕ್ಕೆ ತಮಟೆ ಚಳವಳಿ, 26ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೨:  ಜಿಲ್ಲೆಯ ಹರಿಹರ ತಾಲ್ಲೂಕಿನ ಭಾನುವಳ್ಳಿ ಮತ್ತು ಕಡ್ಲೆಗೊಂದಿ ಗ್ರಾಮದಲ್ಲಿ ಮಾದಿಗ ಹಾಗೂ ಹಿಂದುಳಿದ ಜನಾಂಗದವರಿಗೆ ವಸತಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ನಿರ್ವಸತಿಕ ಗ್ರಾಮಗಳ ಗ್ರಾಮಸ್ಥರು ಹರಿಹರದ ತಾಲ್ಲೂಕು ಕಚೇರಿ ಎದುರು ಜನವರಿ 26ರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಉಭಯ ಗ್ರಾಮಸ್ಥರು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಡ್ಲೆಗೊಂದಿ ಗ್ರಾಮದ ಜೈತುನ್ ಬೀ ಹಾಗೂ ಸಾಕಮ್ಮ ಅವರು, ಈ ಎರಡೂ ಗ್ರಾಮಗಳಲ್ಲಿ ನೆಲೆಸಿರುವ ನಿರ್ವಸತಿಕರು ಈಗ ಚಿಕ್ಕ ಗುಡಿಸಲು, ನೆರಿಕೆ ಮನೆಗಳಲ್ಲಿ ಅನಾರೋಗ್ಯಕರ ವಾತಾವರಣದಲ್ಲಿ ಬದುಕು ನಡೆಸುತ್ತಿದ್ದೇವೆ. ಅಡುಗೆ ಮನೆ, ಶೌಚಾಲಯಗಳಿಲ್ಲದೆ ಮಹಿಳೆಯರು, ವಯೋವೃದ್ಧರು, ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.ಭಾನುವಳ್ಳಿ ಗ್ರಾಮದ ಸರ್ವೆ ನಂ.239/22ರಲ್ಲಿ 2-27 ಎಕರೆ ಎ.ಕೆ. ಸರ್ವೀಸ್ ಇನಾಂ ಜಮೀನಿನಲ್ಲಿ ನಿರ್ವಸತಿ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು ಆಗ್ರಹಿಸಿ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಇವರ ನೇತೃತ್ವದಲ್ಲಿ ಕಳೆದ ಜೂನ್ ತಿಂಗಳಲ್ಲಿ ಭಾನುವಳ್ಳಿಯಿಂದ ಹರಿಹರದವರೆಗೆ ಪಾದಯಾತ್ರೆ ಮಾಡಿ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಲಾಗಿತ್ತು. ಆಗಿನ ತಹಶೀಲ್ದಾರರು 1 ತಿಂಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ನೀಡಿದ ಭರವಸೆ ಈವರೆಗೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದೇ ರೀತಿ ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದಲ್ಲಿ ಮಾದಿಗ ಹಾಗೂ ಹಿಂದುಳಿದ ಸಮುದಾಯದ 120ಕ್ಕೂ ಹೆಚ್ಚು ಕುಟುಂಬಗಳು ಲಭ್ಯವಿರುವ ಕೇವಲ 30 ಚಿಕ್ಕ ಗುಡಿಸಲು, ನೆರಿಕೆ ಮನೆಗಳಲ್ಲಿ ಅನಾಗರಿಕ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಗ್ರಾಮದ ಸರ್ವೆ ನಂ. 37ರಲ್ಲಿ ಎಂಟು ಎಕರೆ ಸರ್ಕಾರಿ ಜಮೀನು ಇದ್ದು, ಇದರಲ್ಲಿ ಕಸ ವಿಲೆವಾರಿಗೆ, ರುದ್ರ ಭೂಮಿಗೆ ಕೆಲ ಭಾಗ ಜಮೀನು ನೀಡಲಾಗಿದ್ದು, ಇನ್ನೂ ಸಾಕಷ್ಟು ಸರ್ಕಾರಿ ಜಮೀನು ಲಭ್ಯವಿದ್ದು ಆ ಜಮೀನಿನಲ್ಲಿ ನಿರ್ವಸತಿಕರಿಗೆ ವಸತಿ ಯೋಜನೆ ಜಾರಿ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.ಕಳೆದ ಏಳು ದಿನಗಳಿಂದ ತಹಶೀಲ್ದಾರ್ ಕಚೇರಿ ಮುಂಭಾಗ ಮಹಿಳೆಯರು ಮಕ್ಕಳು ಸೇರಿ ಧರಣಿ ನಡೆಸಲಾಗುತ್ತಿದೆ, ಆದರೆ ಈವರೆಗೆ ತಾಲ್ಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿಲ್ಲ, ಸಮಸ್ಯೆ ಪರಿಹಾರಕ್ಕೆ ಮುಂದಾಗದೇ ಇರುವುದು ಶೋಚನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿದ್ರೆಗೆ ಜಾರಿರುವ ತಾಲ್ಲೂಕು ಮತ್ತು ಜಿಲ್ಲಾಡಳಿತವನ್ನು ಎಚ್ಚರಿಸುವ ದೃಷ್ಟಿಯಿಂದ ಜ.5 ರಂದು ಹರಿಹರದಲ್ಲಿ ಬೃಹತ್ ತಮಟೆ ಚಳವಳಿ ಆಯೋಜಿಸಿದೆ. ಅಂದು ಬೆಳಿಗ್ಗೆ 11ಕ್ಕೆ ಪಕ್ಕೀರಸ್ವಾಮಿ ಮಠದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಸಾಗಲಾಗುವುದು. ಕದಸಂಸ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿ ಚಳವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಉಭಯ ಗ್ರಾಮಗಳ ಗ್ರಾಮಸ್ಥರಾದ ಮುಬೀನಾ, ಸುಶೀಲಮ್ಮ, ಲಕ್ಷ್ಮಪ್ಪ ಇತರರು ಇದ್ದರು.