49 ಕೋಟಿ ರೂ. ವೆಚ್ಚದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರಿಂದ ಶಂಕುಸ್ಥಾಪನೆ


ಸಂಜೆವಾಣಿ ವಾರ್ತೆ
ಚಿತ್ರದುರ್ಗ ಮಾ.೩; ಹರ್ತಿಕೋಟೆ ಹಾಗೂ ಇತರೆ 37 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ವಿ.ವಿ. ಸಾಗರ ಜಲಾಶಯದಿಂದ ಏಳೆಂಟು ತಿಂಗಳ ಒಳಗಾಗಿ ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಭರವಸೆ ನೀಡಿದರು.ಹಿರಿಯೂರು ತಾಲ್ಲೂಕು ಹರ್ತಿಕೋಟೆ ಗ್ರಾಮದಲ್ಲಿ ಶನಿವಾರದಂದು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಹರ್ತಿಕೋಟೆ ಮತ್ತು ಇತರೆ 37 ಗ್ರಾಮಗಳಿಗೆ 49 ಕೋಟಿ ರೂ. ವೆಚ್ಚದಲ್ಲಿ ವಿ.ವಿ. ಸಾಗರ ಜಲಾಶಯದಿಂದ ಶುದ್ಧೀಕರಿಸಿದ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ನೀರು, ಸೂರು ಮತ್ತು ಶಿಕ್ಷಣ ಈ ಮೂರು ಅಂಶಗಳು ಪ್ರತಿಯೊಬ್ಬರ ಜೀವನದಲ್ಲಿ ಬಹು ಮುಖ್ಯವಾಗಿದ್ದು, ನಮ್ಮ ಸರ್ಕಾರ ಈ ಮೂರು ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.  ಕಳೆದ 2008 ರಲ್ಲಿ ತಾವು ಶಾಸಕರಾಗಿ, ಸಚಿವರಾದ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ನೀಡುವಾಗ, ಹರ್ತಿಕೋಟೆ, ಐಮಂಗಲ ಭಾಗದ ಜನರು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಇರುವ ಬಗ್ಗೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು.  ಹೀಗಾಗಿ ಆ ಸಂದರ್ಭದಲ್ಲಿಯೇ ಐಮಂಗಲ ಮತ್ತಿತರ 40 ಗ್ರಾಮಗಳಿಗೆ ವಿ.ವಿ. ಸಾಗರದಿಂದ ಶುದ್ಧ ನೀರು ಪೂರೈಸಲು ಸರ್ಕಾರದಿಂದ ಅನುಮೋದನೆ ಪಡೆಯಲಾಗಿತ್ತು.  ಆದರೆ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಮತ್ತಿತರ ಅಡೆ ತಡೆಗಳಿಂದ 10 ವರ್ಷ ವಿಳಂಬವಾಗಿತ್ತು.  ಕಳೆದ ಚುನಾವಣೆ ಸಂದರ್ಭದಲ್ಲಿ ತಾವು ಸೋತ ಬಳಿಕ, ಈ ಯೋಜನೆ ಬಹುತೇಕ ನೆನೆಗುದಿಗೆ ಬಿದ್ದಿತ್ತು.  ತಾವು ಮತ್ತೆ ಶಾಸಕರಾಗಿ, ಸಚಿವರಾದ ಬಳಿಕವೇ, ಈ ಯೋಜನೆಗೆ ಮತ್ತೆ ಚಾಲನೆ ನೀಡಿ, ಐಮಂಗಲ ಮತ್ತಿತರ ಗ್ರಾಮಗಳಿಗೆ ಈಗಾಗಲೆ ವಿವಿ ಸಾಗರದಿಂದ ಶುದ್ಧ ನೀರು ಪೂರೈಸುವ ಕೆಲಸ ಪೂರ್ಣಗೊಳಿಸಿ, ನೀರು ನೀಡುತ್ತಿದ್ದೇವೆ.  ಈಗಾಗಲೆ ಹರ್ತಿಕೋಟೆ ಗ್ರಾಮದವರೆಗೆ ವಿವಿ ಸಾಗರದಿಂದ ನೀರು ಹರಿದುಬಂದಿದ್ದು, ಇದೀಗ ಈ ಭಾಗದ ಯರಬಳ್ಳಿ, ಬಬ್ಬೂರು, ಹೊಸ ಯಳನಾಡು, ಗನ್ನಾಯಕನಹಳ್ಳಿ, ಮಸ್ಕಲ್, ಬ್ಯಾಡರಹಳ್ಳಿ ಸೇರಿದಂತೆ 07 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಒಟ್ಟು 38 ಗ್ರಾಮಗಳಿಗೆ ವಿ.ವಿ. ಸಾಗರದಿಂದ ಶುದ್ಧ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ.  ಶೀಘ್ರದಲ್ಲಿಯೇ ಇದೇ ಭಾಗದಲ್ಲಿ ಫಿಲ್ಟರ್ ಹೌಸ್ ನಿರ್ಮಿಸಿ, ಶುದ್ಧೀಕರಿಸಿದ ನೀರನ್ನು ಈ ಎಲ್ಲ ಗ್ರಾಮಗಳಿಗೆ ಇನ್ನು ಏಳೆಂಟು ತಿಂಗಳುಗಳಲ್ಲಿ ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.  ಅದೇ ರೀತಿ ಹಿರಿಯೂರು ತಾಲ್ಲೂಕಿನ ಎಲ್ಲ ಗ್ರಾಮಗಳಿಗೂ ವಿ.ವಿ. ಸಾಗರದಿಂದ ಶುದ್ಧ ಕುಡಿಯುವ ನೀರು ಪೂರೈಸುವ ಗುರಿ ತಮ್ಮದಾಗಿದೆ ಎಂದು ಸಚಿವರು ಹೇಳಿದರು.ಕುವೆಂಪು ಅವರು ಹೇಳಿರುವಂತೆ ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ, ಆದರೆ ಕೆಲವರು ಜಾತಿ, ಧರ್ಮಗಳ ನಡುವೆ ತಂದಿಟ್ಟು, ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.  ಅಪಪ್ರಚಾರಗಳನ್ನು ಜನ ನಂಬಬಾರದು, ಸತ್ಯಾಸತ್ಯತೆ ವಿಮರ್ಶಿಸುವ ಪ್ರಜ್ಞೆ ಸಾರ್ವಜನಿಕರಲ್ಲಿದೆ ಎಂದರು.