ಶಾಸಕರ ಮನದಾಳದ ಮಾತು
ನಿಗಮಮಂಡಳಿ ಅಧ್ಯಕ್ಷಗಿರಿ, ಸರ್ಕಾರದ ಕಾರು ಯಾವುದೂ ಬೇಡ ಸಾಯಲಿ ಬಿಡಿ ನನ್ನ ಕ್ಷೇತ್ರಕ್ಕೆ ಅನುದಾನ ಕೊಟ್ಟರೆ ಸಾಕು
ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕಿತ್ತು. ಎಂ.ಪಿ. ಕುಮಾರಸ್ವಾಮಿ, ಮೂಡಿಗೆರೆ ಶಾಸಕ

ನನ್ನ ಹಿರಿತನಕ್ಕೆ ನಿಗಮ ಮಂಡಳಿ ಕೊಟ್ಟು ನನಗೆ ಅಪಮಾನ ಮಾಡಿದ್ದಾರೆ. ಇನ್ನಷ್ಟು ದಿನ ಸಮಾಧಾನದಿಂದ ಇರಲು ಸಾಧ್ಯ. ಇಷ್ಟು ದಿನ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ನಾನು ರಾಜಕೀಯ ಜೀವನಕ್ಕೆ ಬಂದಿದ್ದು ತಪ್ಪು ಎನಿಸುತ್ತಿದೆ. ಬಿ.ಎಚ್. ತಿಪ್ಪಾರೆಡ್ಡಿ,. ಚಿತ್ರದುರ್ಗ ಶಾಸಕ

ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೇಕಾರರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಿತ್ತು. ನಮ್ಮ ಕ್ಷೇತ್ರದ ನೇಕಾರ ಮುಖಂಡರನ್ನು ಈ ನಿಗಮಕ್ಕೆ ನೇಮಕ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರುತ್ತೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ, ಬೇರೆ ನಿಗಮ ಮಂಡಳಿ ಕೊಟ್ಟರೂ ಸರಿ, ಕೊಡದಿದ್ದರೂ ಸರಿ. ಸಿದ್ದು ಸವದಿ, ತೇರದಾಳ ಶಾಸಕ

ನಿಗಮ ಮಂಡಳಿ ಅಧ್ಯಕ್ಷಗಿರಿ ನೇಮಕದ ಅಸಮಾಧಾನ ಬಗ್ಗೆ ಬಹಿರಂಗವಾಗಿ ಮಾತನಾಡಲ್ಲ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ.
-ರಾಜ್‌ಕುಮಾರ್ ತೇಲ್ಕರ್, ಸೇಡಂ ಶಾಸಕ

ಯಡಿಯೂರಪ್ಪ ಅವರಿಗೆ ನನ್ನನ್ನು ಮಂತ್ರಿ ಮಾಡುವ ಮನಸ್ಸಿತ್ತು. ಆದರೆ, ಕೆಎಸ್‌ಆರ್‌ಟಿಸಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮರು ಮಾತನಾಡದೆ ಅವರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ.
-ಎಂ. ಚಂದ್ರಪ್ಪ, ಹೊಳಲ್ಕೆರೆ ಶಾಸಕ

ಮುಖ್ಯಮಂತ್ರಿ ಯಡಿಯೂರಪ್ಪನವರು ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ನಿಗಮದ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಆಶಯದಂತೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ.
-ಎಸ್.ವಿ. ರಾಮಚಂದ್ರ, ಜಗಳೂರು ಶಾಸಕ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ನನ್ನ ದುರಾದೃಷ್ಟದಿಂದ ಸಚಿವಸ್ಥಾನ ಕೈತಪ್ಪಿದೆ. ನನ್ನ ಹಿರಿತನಕ್ಕೆ ಸಚಿವಸ್ಥಾನ ನೀಡಬೇಕು ಎಂಬ ಇಚ್ಚೆಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇದ್ದರೂ ರಾಜಕೀಯ ಪರಿಸ್ಥಿತಿಯಿಂದ ಅದು ಸಾಧ್ಯವಾಗಿಲ್ಲ. ಮರು ಮಾತನಾಡದೆ ಮುಖ್ಯಮಂತ್ರಿಗಳ ತೀರ್ಮಾನವನ್ನು ಒಪ್ಪಿ ಅಧಿಕಾರ ಸ್ವೀಕರಿಸಿ ಒಳ್ಳೆಯ ಕೆಲಸ ಮಾಡುತ್ತೇನೆ.
ಅರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ

ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದೇನೆ. ನನಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ಬೇಕಿಲ್ಲ, ನನಗೆ ಅಸಮಧಾನವೂ ಇಲ್ಲ, ನನಗೆ ನೀಡಿರುವ ನಿಗಮದ ಅಧ್ಯಕ್ಷಗಿರಿ ಹುದ್ದೆಯನ್ನು ಹಿರಿಯ ಶಾಸಕರಿಗೆ ನೀಡಲಿ, ನಾನು ಬಿಎಸ್‌ವೈ ಅವರ ಅಮರ ಅಭಿಮಾನಿ.
ಪ್ರೀತಂಗೌಡ, ಹಾಸನ ಶಾಸಕ

ನಾನು 4 ಬಾರಿ ಶಾಸಕನಾಗಿ 1 ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ.ನಾನು ನಿಗಮ ಮಂಡಳಿ ಅಧ್ಯಕ್ಷಗಿರಿ ಕೇಳಿರಲಿಲ್ಲ. ಕಾರ್ಯಕರ್ತರಿಗೆ ಕೊಡಬಹುದಿತ್ತು. ಪಕ್ಷದ ಹಿರಿಯನಾಯಕರು ಮತ್ತು ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ.
-ಶಿವನಗೌಡ ನಾಯಕ್, ದೇವದುರ್ಗ ಶಾಸಕ