45 ಸಾವಿರಕ್ಕೂ ಅಧಿಕ ಮಂದಿಗೆ ಹೊಸ ಸೋಂಕು

ನವದೆಹಲಿ, ನ. ೮- ದೇಶಾದ್ಯಂತ ಸಾಂಕ್ರಾಮಿಕ ರೋಗ ಕೋರೋನಾ ಮಹಾಮಾರಿಯ ಉಪಟಳ ಮುಂದುವರೆದಿದ್ದು ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೫ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಜನರಲ್ಲಿನ ಆತಂಕವೂ ಮುಂದುವರೆಯುವಂತೆ ಮಾಡಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಗ್ಗೆ ನೀಡಿರುವ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೫ ಸಾವಿರದ ೬೭೪ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ದೇಶದಲ್ಲಿನ ಸೋಂಕಿತರ ಸಂಖ್ಯೆ ೮೫ ಲಕ್ಷದ ೭ ಸಾವಿರದ ೭೫೪ ಕ್ಕೆ ಏರಿಕೆಯಾಗಿದೆ.

ನಿನ್ನೆ ಬೆಳಗಿನವರೆಗೆ ದೇಶದಲ್ಲಿ ೫೦ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತಿತ್ತು . ಇಂದು ಬೆಳಗ್ಗೆ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ನಿನ್ನೆಗಿಂತ ಇಂದು ಸ್ವಲ್ಪಮಟ್ಟಿಗೆ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂಬ ವಿಚಾರ ಗಮನಾರ್ಹವಾಗಿದೆ.

ಇದೇ ಅವಧಿಯಲ್ಲಿ ೫೫೯ ಸೋಂಕಿತರು ಗುಣಮುಖರಾಗದೆ ಸಾವನ್ನಪ್ಪಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮಹಾಮಾರಿ ಸೋಂಕಿಗೆ ಬಲಿಯಾಗುತ್ತಿರುವ ಜನರ ಸಂಖ್ಯೆ ೫೫೦ ರ ಆಜುಬಾಜಿನಲ್ಲಿ ಮುಂದುವರೆದಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸತತವಾಗಿ ಇಳಿಮುಖದ ಸಾಗುತ್ತಿರುವುದು ವೈದ್ಯಕೀಯ ಸಮುದಾಯದಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ ಎಂದರೆ ತಪ್ಪಾಗಲಾರದು. ಆದರೆ ಕೆಲವು ರಾಜ್ಯಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಮಾಡಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೩೯೬೭ ಸಕ್ರಿಯ ಪ್ರಕರಣಗಳು ಕಡಿಮೆಯಾಗಿದ್ದು ಇದರೊಂದಿಗೆ ಪ್ರಸ್ತುತ ದೇಶದಲ್ಲಿ ೫ ಲಕ್ಷದ ೧೨ ಸಾವಿರ ೬೬೫ ಸಕ್ರಿಯ ಪ್ರಕರಣಗಳು ದಾಖಲಾಗಿದ್ದು ಸಂಬಂಧಿತ ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಇನ್ನೊಂದು ಬೆಳವಣಿಗೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೯ ಸಾವಿರದ ೮೨ ರೋಗಿಗಳು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿ ತನಕ ೭೮ ಲಕ್ಷದ ೬೮ ಸಾವಿರದ ೯೬೮ ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂಬುದು ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ತಿಳಿದುಬಂದಿದೆ.

ಮಹಾರಾಷ್ಟ್ರ ಕೇರಳ ಮತ್ತು ದೆಹಲಿ ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗುತ್ತಿರುವುದು ಸಮಾಧಾನಕರ ವಿಚಾರವಾಗಿದೆ. ಮಹಾರಾಷ್ಟ್ರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿರುವ ವಿಚಾರ ತಿಳಿದುಬಂದಿದೆ ಅದೇ ರೀತಿ ಕೇರಳದಲ್ಲಿ ೭೦೦೦ ದೆಹಲಿಯಲ್ಲಿ ೬೦೦೦ ರೋಗಿಗಳು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಮಹಾರಾಷ್ಟ್ರ ದೆಹಲಿ ಪಶ್ಚಿಮ ಬಂಗಾಳ ಛತ್ತಿಸ್ಗಢ ಕರ್ನಾಟಕ-ಕೇರಳ ತಮಿಳು ನಾಡು, ಉತ್ತರ ಪ್ರದೇಶ, ಹರಿಯಾಣ ಮತ್ತು ಒಡಿಶಾ ರಾಜ್ಯಗಳಲ್ಲಿ ಶುಕ್ರವಾರ ಮತ್ತು ಶನಿವಾರದ ನಡುವೆ ೮೩ರಷ್ಟು ಸಾವು ಪ್ರಕರಣಗಳು ಸಂಭವಿಸಿವೆ ಎಂಬ ಮಾಹಿತಿ ಹೊರಬಿದ್ದಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವತಿಯಿಂದ ನಿನ್ನೆ ತನಕ ೧೧ ಕೋಟಿ ೭೭ ಲಕ್ಷದ ೩೬ ಸಾವಿರದ ೭೯೧ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ನಿನ್ನೆ ಒಂದೇ ದಿನ ೧೧ ಲಕ್ಷದ ೯೪ ಸಾವಿರದ ೪೮೭ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ.