45 ವರ್ಷ ಮೇಲ್ಪಟ್ಟವರು ತಪ್ಪದೆ ಲಸಿಕೆ ಹಾಕಿಸಿ -ಬಳ್ಳಾರಿ


ಬ್ಯಾಡಗಿ,ಎ.3: ರಾಜ್ಯದಲ್ಲಿ ಮತ್ತೇ ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರಲ್ಲದೇ ಸರ್ಕಾರದ ನಿರ್ದೇಶನದಂತೆ 45ವರ್ಷ ಮೇಲ್ಪಟ್ಟವರಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೂಚಿಸಿದರು.
ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಶನಿವಾರ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುತ್ತಾ ಆರೋಗ್ಯ ಇಲಾಖೆಯ ಮೇಲಿನ ಪ್ರಗತಿಯ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೋವಿಡ್ ಮಹಾಮಾರಿಯಿಂದ ಜನರು ತೀವ್ರ ಸಂಕಷ್ಟಗೊಳಗಾಗಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡುವುದು ಬಹು ಅಗತ್ಯವಾಗಿದ್ದು, ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಹೀಲ್ ಹರವಿ ಮಾತನಾಡಿ, ತಾಲೂಕಿನಲ್ಲಿ 45ವರ್ಷ ಮೇಲ್ಪಟ್ಟವರು 32ಸಾವಿರ ಜನರಿದ್ದು, ಅದರಲ್ಲಿ ಈಗಾಗಲೇ 3142 ಜನರಿಗೆ ಕೋವಿಡ್ ಲಸಿಕೆಯನ್ನು ಹಾಕಲಾಗಿದೆ. ಅಲ್ಲದೇ ತಾಲೂಕಿನಲ್ಲಿ ಏಪ್ರಿಲ್ 1ರಿಂದ ಮೋಟೆಬೆನ್ನೂರು, ಬಿಸಲಹಳ್ಳಿ, ಮತ್ತೂರು ಹಾಗೂ ಬನ್ನಿಹಟ್ಟಿ ಗ್ರಾಮಗಳ ಉಪ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತಿದೆ. ತಾಲೂಕಿನಲ್ಲಿ ದಿನಕ್ಕೆ ಒಂದು ಸಾವಿರ ಜನರಿಗೆ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ಹೇಳಿದರು.
ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರೈತ ಆತ್ಮಹತ್ಯೆ ಪ್ರಕರಣದಲ್ಲಿ ಕೇವಲ ಬ್ಯಾಂಕ್‍ಗಳಲ್ಲಿ ಸಾಲ ಮಾಡಿದವರನ್ನೇ ಪರಿಗಣಿಸಲಾಗುತ್ತಿದ್ದು, ರೈತರ ಆತ್ಮಹತ್ಯೆಗೆ ಕೇವಲ ಬ್ಯಾಂಕಿನ ಸಾಲವೊಂದನ್ನೇ ಮಾನದಂಡವಾಗಿಟ್ಟುಕೊಳ್ಳುವುದು ಸೂಕ್ತವಲ್ಲ, ಕೂಡಲೇ ಎಲ್ಲ ಆಯಾಮಗಳನ್ನು ಪರಿಶೀಲಿಸಿ ರೈತ ಆತ್ಮಹತ್ಯೆಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದರು.
ಕೆಡಿಪಿ ಸದಸ್ಯ ಕ್ಷೇಣಿಕರಾಜ ಯಳವತ್ತಿ ಮಾತನಾಡಿ, ನರೇಗಾ ಯೋಜನೆಯಡಿ ರೈತರ ಜಮೀನುಗಳಿಗೆ ಉಪಯೋಗವಾಗುವ ಬದು ಹಾಗೂ ನೀರುಗಾಲುವೆ ನಿರ್ಮಾಣವನ್ನು ರೈತರೇ ಮಾಡಿಕೊಳ್ಳಲು ಅನೂಕುಲ ಕಲ್ಪಿಸಬೇಕು. ಆದರೆ ಈ ಯೋಜನೆಯಡಿ ಕಾಮಗಾರಿಗಳನ್ನು ನಡೆಸಲು ಏಜೆಂಟರ್ ಹಾವಳಿ ಹೆಚ್ಚಾಗಿದ್ದು, ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ, ನರೇಗಾ ಯೋಜನೆಯಡಿ ಏಜೆಂಟರ್ ಹಾವಳಿಗೆ ಆಸ್ಪದ ನೀಡುವುದಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಾಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಜಿಪಂ. ಸದಸ್ಯರಾದ ಸುಮಂಗಲಾ ಪಟ್ಟಣಶೆಟ್ಟಿ, ಅನುಸೂಯಾ ಕುಳೇನೂರ, ಅಬ್ದುಲ್ ಮುನಾಫ್ ಎಲಿಗಾರ, ತಹಶೀಲ್ದಾರ ರವಿಕುಮಾರ ಕೊರವರ, ಕೆಡಿಪಿ ಸದಸ್ಯರಾದ ಗಿರಿಜಮ್ಮ ದೇಶಗತ್ತಿ, ಎನ್.ಎಫ್.ಹರಿಜನ, ಎಸ್.ಎನ್. ಜಿಗಳಿಕೊಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಟಿಸಿ ಅಳವಡಿಸಲು ಹಣದ ಬೇಡಿಕೆ:
ಕೆಡಿಪಿ ಸದಸ್ಯ ನಂದೀಶ ನೆಲ್ಲಿಕೊಪ್ಪದ ಮಾತನಾಡಿ, ತಾಲೂಕಿನ ವಿವಿಧೆಡೆ ವಿದ್ಯುತ್ ಕಂಬಗಳಿಗೆ ಟ್ರಾನ್ಸ್’ಫಾರ್ಮರ್ (ಟಿ.ಸಿ.) ಅಳವಡಿಸಲು ಗುತ್ತಿಗೆದಾರನೊಬ್ಬ 25ಸಾವಿರ ರೂಗಳ ಬೇಡಿಕೆಯನ್ನು ಇಡುತ್ತಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಿಸಿದ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸುವಂತೆ ಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಎಇಇ ಹಾಲೇಶ ಅಂತರವಳ್ಳಿ, ಸದರಿ ವಿಷಯದ ಕುರಿತು ತಮ್ಮ ಗಮನಕ್ಕೆ ಬಂದಿರುವುದಿಲ್ಲ ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಗುತ್ತಿಗೆದಾರನ ವಿರುದ್ಧ ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ಕ್ರಮ ವಹಿಸುವುದಾಗಿ ಸಭೆಗೆ ತಿಳಿಸಿದರು.


ಕಾಮಗಾರಿ ಪೂರ್ಣಗೊಂಡರೂ ಹಣ ನೀಡಿಲ್ಲ:
ಕೆಡಿಪಿ ಸದಸ್ಯ ಜೆ.ಎಚ್.ಚಿಲ್ಲೂರಮಠ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಾಲೂಕಿನ ಖುರ್ದಕೋಡಿಹಳ್ಳಿಯಲ್ಲಿ ಸ್ಮಶಾನ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸಹ ಅದಕ್ಕೆ ಹಣ ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಸದರಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ಹಣ ಬಿಡುಗಡೆಗೆ ಕ್ರಮ ವಹಿಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯನ್ನು ಆಗ್ರಹಿಸಿದರು.