45 ಯುವಕರಿಂದ ರಕ್ತದಾನ

ಬೀದರ್:ಡಿ.29:ಸಾಗರ ಖಂಡ್ರೆ ಅಭಿಮಾನಿ ಬಳಗವು ನಗರದಲ್ಲಿ ಗುರುವಾರ ಸಾಮಾಜಿಕ ಚಟುವಟಿಕೆಗಳೊಂದಿಗೆ ಎನ್ ಎಸ್‍ಯುಐ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆ ಅವರ 26ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು.
ಸಾಗರ ಖಂಡ್ರೆ ಅವರ ಜನ್ಮದಿನ ಶುಕ್ರವಾರ (ಡಿ.29) ಇದೆ. ಆದರೆ, ಬಳಗದ ಸದಸ್ಯರು ಒಂದು ದಿನ ಮೊದಲೇ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಕೇಕ್ ಕತ್ತರಿಸಿ, ರಕ್ತದಾನ ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಜನ್ಮದಿನ ಆಚರಿಸಿದರು.
ಬಳಗದ 45 ಸದಸ್ಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ರಕ್ತದಾನ ಮಾನವೀಯ ಕಾರ್ಯವಾಗಿದೆ. ಅದರಿಂದ ಅನೇಕ ಜೀವಗಳನ್ನು ಉಳಿಸಲು ನೆರವಾಗುತ್ತದೆ ಎಂದು ಸಾಗರ ಖಂಡ್ರೆ ಹೇಳಿದರು.
ರಕ್ತದ ತುರ್ತು ಅವಶ್ಯಕತೆ ಇರುವವರಿಗೆ ನೆರವಾಗುವ ದಿಸೆಯಲ್ಲಿ ಅಭಿಮಾನಿ ಬಳಗದಿಂದ ರಕ್ತದಾನದ ಮೂಲಕ ತಮ್ಮ ಜನ್ಮದಿನ ಆಚರಿಸಿರುವುದು ಸಂತಸ ಉಂಟು ಮಾಡಿದೆ ಎಂದು ತಿಳಿಸಿದರು.
ಸಾಗರ ಖಂಡ್ರೆ ಅವರು ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದಾರೆ. ಭಾಲ್ಕಿಯಲ್ಲಿ ಬೃಹತ್ ರಕ್ತದಾನ ಶಿಬಿರ, ಕೋವಿಡ್ ವೇಳೆ ಆಹಾರ ಸಾಮಗ್ರಿ ಕಿಟ್ ವಿತರಣೆ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜ್ಞಾನೇಶ್ವರ ನಿರಗುಡೆ, ಜಿಲ್ಲಾ ಶಸ್ತ್ರಚಿಕಿತ್ಸಕ ಮಹೇಶ ಬಿರಾದಾರ, ನಗರಸಭೆ ಸದಸ್ಯ ಹಣಮಂತ ಮಲ್ಕಾಪುರ, ಮಾಜಿ ಸದಸ್ಯ ಧನರಾಜ ಹಂಗರಗಿ, ಕಾಂಗ್ರೆಸ್ ಜಿಲ್ಲಾ ಎಸ್.ಸಿ. ಘಟಕದ ಅಧ್ಯಕ್ಷ ಡಿ.ಕೆ. ಸಂಜುಕುಮಾರ, ಜಿಲ್ಲಾ ಎಸ್.ಟಿ. ಘಟಕದ ಅಧ್ಯಕ್ಷ ರಾಕೇಶ ಕುರುಬಖೇಳಗಿ, ಎನ್ ಎಸ್‍ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸಚಿನ್ ಮಲ್ಕಾಪುರ, ಈಶ್ವರ ಖಂಡ್ರೆ ಅಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಅಮರ ಹಜನಾಳ, ಅನಿಲ್ ಹಾಲಹಿಪ್ಪರ್ಗಾ ಮೊದಲಾದವರು ಪಾಲ್ಗೊಂಡಿದ್ದರು.