45 ನೀಟ್ ಕನ್ನಡ ಮಾಧ್ಯಮದ ರಿಪಿಟರ್ಸ್‍ರಿಗೆ ಶಾಹೀನ ಉಚಿತ ತರಬೇತಿ

ಬೀದರ:ಜು.6:ಡಾಕ್ಟರ್ ಆಗುವ ಕನಸನ್ನು ಹೊತ್ತ ಕನ್ನಡ ಮಾಧ್ಯಮದ ರಿಪಿಟರ್ಸ್ ಮಕ್ಕಳಿಗೆ ಉಜ್ವಲ ಭವಿಷ್ಯ. ಮಕ್ಕಳ ಪರೀಕ್ಷೆಯ ಸಂದರ್ಭದಲ್ಲಿ ಒತ್ತಡದಿಂದಾಗಿ ಸ್ವಲ್ಪ ಹಿನ್ನಡೆ ಆದರೂ ಸಹಿತ ಅವರ ಕನಸನ್ನು ನನಸು ಮಾಡಲು ಶಾಹೀನ ಶಿಕ್ಷಣ ಸಂಸ್ಥೆ ಮುಂದೆ ಬಂದಿರುವುದು ಶ್ಲಾಘನೀಯ ಎಂದು ಕ.ಸಾ.ಪ.ಅಧ್ಯಕ್ಷ ಸುರೇಶ ಚನ್ನಶೆಟ್ಟಿ ನುಡಿದರು.

ಶಾಹೀನ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮದ ಮಕ್ಕಳಿಗೆ ಉಚಿತ ತರಬೇತಿ, ಸನ್ಮಾನ ಹಾಗೂ ಶೈಕ್ಷಣಿಕ ಕಿಟ್ (ನೀಟ್ ಸ್ಟಡಿ ಮಟೇರಿಯಲ್ಸ) ವಿತರಿಸಿ ಮಾತನಾಡಿದ ಸುರೇಶ ಚನ್ನಶೆಟ್ಟಿ… 75ನೇ ಸುವರ್ಣ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿ ನೆನಪಿಗಾಗಿ ಕನ್ನಡ ಮಾಧ್ಯಮದಲ್ಲಿ ಓದಿ ನೀಟನಲ್ಲಿ 350 ಅಂಕ ಪಡೆದು ರಿಪಿಟರ್ಸ್ ಮಕ್ಕಳಿಗೆ ಸಹಕರಿಸಲು ಗೂಗಲ್ ಷೀಟ್ ಅಳವಡಿಸಿ ಅರ್ಜಿ ಅವ್ಹಾನಿಸಲಾಗಿತ್ತು, ಅದರಲ್ಲಿ ರಾಯಚೂರ, ಯಾದಗಿರ, ಕಲಬುರಗಿ, ಬೀದರ ಮಕ್ಕಳ ಶೈಕ್ಷಣಿಕ ಅರ್ಹತೆ, ಕನ್ನಡ ಮಾಧ್ಯಮ, ಗ್ರಾಮೀಣ ದಾಖಲೆಗಳನ್ನು ಪರಿಶೀಲಿಸಿ ಕೊನೆಯಲ್ಲಿ 45 ಮಕ್ಕಳಿಗೆ ಪ್ರವೇಶ ಕೊಡಲಾಯಿತು. ಮುಂದುವರೆದು ಶಾಹೀನ ಶಿಕ್ಷಣ ಸಂಸ್ಥೆ ಕಳೆದ ಐದು ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿ ಓದಿ ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟ ಎದುರಾದಾಗ ಪ್ರತಿ ವರ್ಷ 50 ಕನ್ನಡ ಮಾಧ್ಯಮದ ಮಕ್ಕಳಿಗೆ ಉಚಿತ ವ್ಯವಸ್ಥೆ ಕಲ್ಪಸಿರುವುದು ಶ್ಲಾಘನೀಯ ಎಂದರು. ಇದರಿಂದ ಕನ್ನಡ ಮಾಧ್ಯಮಕ್ಕೆ ಇನ್ನಷ್ಟು ಗೌರವ ಲಭಿಸಿ ಮಕ್ಕಳು ಕನ್ನಡ ಕಲಿಯಲು ಹಿಂದೇಟು ಹಾಕೋದಿಲ್ಲ ಎಂದು ತಮ್ಮ ಅನುಭವದ ಮಾತು ಆಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಹೀನ ಶಿಕ್ಷಣ ಸಂಸ್ಥೆಯ ರೂವಾರಿಗಳಾದ ಡಾ. ಅಬ್ದುಲ್ ಖದೀರ ಮಾತನಾಡಿ ಇಲ್ಲಿ ಕೇವಲ ಮುಸ್ಲಿಂ ಜನರಿಗೆ ಶಿಕ್ಷಣ ಕೊಡಲಾಗುತ್ತಿದೆ ಎಂಬ ಆಪಾದನೆ ಕೇಳಿಬರುತ್ತಿತ್ತು. ನಾವೆಂದು ಆ ವಿಚಾರ ಮಾಡಲೇ ಇಲ್ಲ. ಕನ್ನಡ ಪವಿತ್ರವಾದ ಭಾಷೆ. ಇದು ಬಾಂಧವ್ಯ ಬೆಸೆಯುತ್ತದೆ. ನಮ್ಮಲ್ಲಿ ಹೆಚ್ಚು ಮಕ್ಕಳು ಕನ್ನಡ ಮಾಧ್ಯಮ ದಲ್ಲಿ ಓದಿ ಡಾಕ್ಟರ್ ಆಗಿರುವುದಕ್ಕೆ ಅನೇಕ ಜ್ವಲಂತ ಉದಾಹರಣೆ ನೀಡಿದರು.

ಬೀದರ ಬ್ರಿಮ್ಸನಲ್ಲಂತು ನಮ್ಮ ವಿದ್ಯಾರ್ಥಿ ಗಳು ತುಂಬಿ ತುಳುಕುತ್ತಿದ್ದಾರೆ ಆದರೆ ಇನ್ನು ಮುಂದೆ ಬೆಂಗಳೂರಿನಲ್ಲಿ ಸಹಿತ ಬೀದರ ಮಕ್ಕಳು ಪ್ರವೇಶ ಪಡೆಯುವಂತಾಗಲೆಂದು ಶುಭ ಹಾರೈಸಿದರು. ತಾವು ಇಂದು ಸಂಕಷ್ಟದಲ್ಲಿ ಇದ್ದು ಕನಸನ್ನು ನನಸು ಮಾಡಿಕೊಳ್ಳುತ್ತಿರುವಿರಿ ಮುಂದಿನ ದಿನಮಾನಗಳಲ್ಲಿ ಹಣದ ಬೆನ್ನು ಹತ್ತದೆ ಸಮಾಜದ ಸ್ವಾಸ್ಥ್ಯ ಕಾಪಾಡಲು ನಿಮ್ಮ ಮನ ಮಿಡಿಯಲೆಂದು ಸಲಹೆ ನೀಡಿದರು. ಸಂಪೂರ್ಣ ಎಲ್ಲಾ ಮಕ್ಕಳ ದಾಖಲೆಗಳನ್ನು ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಹಾಗೂ ಕಾರ್ಯದರ್ಶಿ ಟಿ.ಎಂ. ಮಚ್ಚೆ , ಉಪನ್ಯಾಸಕರಾದ ಆರೀಫ ಪಟ್ಟಿ ಪರಿಶೀಲಿಸಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಹತ್ತಿಗೂಡೂರಿನ ಮುಸ್ಕಾನ ತಂದೆ ಸೋಫಿ(403), ಜವರಗಿಯ ಮಹಾಲಕ್ಷ್ಮಿ ಹಣಮಂತರಾಯ (352) ಬೀದರಿನ ರಮ್ಯಾ ತಂದೆ ಶ್ರೀ ಮಂತ (484) ಹಾಗೂ ಸ್ವಾತಿ ಸಂತೋಷ ಮಾನಶೆಟ್ಟ (492) ಮಾತನಾಡಿ ಶಾಹೀನ ಶಿಕ್ಷಣ ಸಂಸ್ಥೆಯ ಹೆಸರು ಅಜರಾಮ ಮಾಡಲು ನಾವೆಲ್ಲರು ಕಂಕಣಬದ್ದ. ಜೊತೆಗೆ ಡಾ ಕನಸನ್ನು ಕಂಡು ಆರ್ಥಿಕ ವೇದನೆಯಲ್ಲಿರುವಾಗ ಹೊಸ ವಿಚಾರ ಉಳ್ಳ ನಾಡಿನ ಪ್ರಾತಿನಿಧಿಕ ಸಂಸ್ಥೆಯಾದ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಕೈ ಹಿಡಿದಿರುವುದು ನಮ್ಮೆಲ್ಲರ ಭಾಗ್ಯ. ಇಂಥ ಜನಪರ ಕಾಳಜಿಗೆ ನಮ್ಮೆಲ್ಲರ ನಮನ ಎಂದು ತಮ್ಮ ಭಾವನೆ ಹಂಚಿಕೊಂಡರು. ಕೊನೆಯಲ್ಲಿ 45 ಮಕ್ಕಳ ಆಯ್ಕೆ ಪಟ್ಟಿಯನ್ನು ಆರೀಫ ಸರ್ ಓದಿದಾಗ ಅವರೆಲ್ಲರಿಗೂ ಉಚಿತ ಪ್ರವೇಶ ನೀಟ್ ನ ಶೈಕ್ಷಣಿಕ ಕಿಟ್ ಹಾಗೂ ಶಾಲು ಹೂವಿನ ಹಾರ ಹಾಕಿ ಆಶೀರ್ವದಿಸಿದರು