45 ಟಿಎಂಸಿ ನೀರು ನದಿಗೆ

ಬಳ್ಳಾರಿ, ಸೆ.16: ಈ ಬಾರಿಯ ಮುಂಗಾರು ಮಳೆಯಿಂದ ತುಂಗಭದ್ರ ಜಲಾಶಯ ಭರ್ತಿಯಾಗಿ 45 ಟಿಎಂಸಿಯಷ್ಟು ನೀರು ನದಿಗೆ ಹರಿದು ಹೋಗಿದೆ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಹೇಳಿದ್ದಾರೆ.
ಈ ಬಾರಿ ಕಳೆದ ಮೇ 5ರಿಂದ ಜಲಾಶಯಕ್ಕೆ ನೀರು ಬರಲು ಆರಂಭವಾಯ್ತು, ಮೇ.20ರಿಂದ ತುಂಗಭದ್ರ ಜಲಾಶಯದಿಂದ ನೀರು ಬಂತು. ಈ ವರೆಗೆ ತುಂಗಾದಿಂದ 92 ಟಿಎಂಸಿ ನೀರು ಬಂದಿದೆ. ಭದ್ರಾದಿಂದ ಈ ವರೆಗೆ ನೀರು ಬಂದಿಲ್ಲ. ಕಾರಣ ಭದ್ರದಿಂದ ವಾಣಿವಿಲಾಸ ಸಾಗರ ಡ್ಯಾಂಗೆ ನೀರು ಸರಬರಾಜು ಆರಂಭಗೊಂಡಿದೆ. ಇನ್ನು ತುಂಗಾದಿಂದ ಭದ್ರೆಗೆ ನೀರು ಪಡೆಯುವ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗುತ್ತಿದೆ. ಇದು ಆದರೆ ತುಂಗಭದ್ರ ಜಲಾಶಯ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ.
ಅದಕ್ಕಾಗಿ ಈಗಲೇ ಸರ್ಕಾರ ಎಚ್ಚೆತ್ತುಕೊಂಡು ಆಲಮಟ್ಟಿಯಿಂದ ಹರಿದು ಹೋಗುವ ನೀರನ್ನು ತುಂಗಭದ್ರ ಜಲಾಶಯಕ್ಕೆ ತರಲು ಕೃಷ್ಣ-ತುಂಗಭದ್ರ ನದಿ ಜೋಡಣೆಗೆ ಮುಂದಾಗಬೇಕು. ಈ ದಿಶೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು 3 ಜಿಲ್ಲೆಗಳಾದ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಶಾಸಕರ, ಸಂಸದರ ಸಭೆ ಕರೆದು ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ ಎಂದರು.
ಈ ವರೆಗೆ ಜಲಾಶಯಕ್ಕೆ 183 ಟಿಎಂಸಿ ನೀರು ಹರಿದು ಬಂದಿದೆ. ಅದರಲ್ಲಿ ಕಾಲುವೆಗಳ ಮೂಲಕ ಕೃಷಿಗೆ ಕಳೆದ 50 ದಿನಗಳಲ್ಲಿ 40 ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.