400 ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ

ಕೋಲಾರ, ಡಿ,೨೩- ಸಮಾಜಕ್ಕೆ ಕಂಟಕವಾಗಿರುವ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿಯನ್ನು ತಡೆಯಲು ವಿದ್ಯಾರ್ಥಿಗಳು ಸಂಕಲ್ಪ ಮಾಡಿ, ನಿಮಗಾಗಿಯೇ ನೀಡಿರುವ ಮಕ್ಕಳ ಸಹಾಯವಾಣಿ ೧೦೯೮ರ ಪ್ರಯೋಜನ ಪಡೆದು ಸಾಮಾಜಿಕ ಪಿಡುಗಗಳ ತಡೆಗೆ ಸರ್ಕಾರ,ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಬಸವಂತಪ್ಪ ಕರೆ ನೀಡಿದರು.
ಜಿಲ್ಲೆಯ ಕೆಜಿಎಫ್ ನಗರದ ಸೆಂಟ್‌ಜೋಸೆಫ್ ಪ್ರೌಢಶಾಲೆಯಲ್ಲಿ ನಡೆದ ಪ್ರೇರಣಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ೪೦೦ ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಲ್ಯವಿವಾಹ ತಡೆಗೆ ಸರ್ಕಾರ ಅನೇಕ ಕಠಿಣ ಕಾನೂನು ಜಾರಿಗೆ ತಂದಿದೆ ಇದರ ನಡುವೆಯೂ ಕೆಲವು ಕಡೆ ಕದ್ದುಮುಚ್ಚಿ ಬಾಲ್ಯವಿವಾಹ ನಡೆಯುತ್ತಿದೆ ಎಂದು ವಿಷಾದಿಸಿದ ಅವರು, ವಿದ್ಯಾರ್ಥಿ ಸಮುದಾಯ ಮನಸ್ಸು ಮಾಡಿದರೆ ಈ ಪಿಡುಗನ್ನು ಬೇರು ಸಮೇತ ಕಿತ್ತೊಗೆಯಬಹುದು ಎಂದರು.
ಸರ್ಕಾರ ಮಕ್ಕಳಿಗಾಗಿಯೇ ಉಚಿತ ಸಹಾಯವಾಣಿ ನೀಡಿದೆ, ಬಾಲ್ಯವಿವಾಹ, ಮಕ್ಕಳ ಮೇಲೆ ದೌರ್ಜನ್ಯದಂತಹ ಘಟನೆಗಳು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರೆ ತಡೆಯಲು ಸಹಕಾರಿಯಾಗುತ್ತದೆ ಎಂದರು.
ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ಮೆಟ್ಟಿ ಮುನ್ನುಗ್ಗಲು ಗುರಿ ಮುಖ್ಯ ಎಂಬುದನ್ನು ಅರಿತು ವಿದ್ಯಾರ್ಥಿಗಳಾದ ನೀವು ಯಶಸ್ಸು ಸಾಧಿಸುವ ಛಲದೊಂದಿಗೆ ಶ್ರದ್ಧೆ,ನಿರಂತರ ಅಭ್ಯಾಸ ಮುಂದುವರೆಸಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಮ್ಮ ಜಿಲ್ಲೆಗೆ ಮೊದಲ ಸ್ಥಾನವನ್ನು ತಂದುಕೊಡಿ ಎಂದು ಕಿವಿಮಾತು ಹೇಳಿದರು.
ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ವಿಶೇಷ ತರಗತಿ ನಡೆಯುತ್ತಿದೆ, ಮಕ್ಕಳು ಶಾಲೆಗೆ ಗೈರಾಗಬಾರದು, ಎಸ್ಸೆಸ್ಸೆಲ್ಸಿ ನಿಮ್ಮ ಜೀವನವನ್ನು ಬದಲಿಸುವ ಸಮಯ, ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬುದನ್ನು ಅರಿತು ಅಭ್ಯಾಸ ಮಾಡಿ ಯಶಸ್ಸು ಸಾಧಿಸಿ ಎಂದು ಹಾರೈಸಿದರು.
ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಮಾತನಾಡಿ, ಕೆಜಿಎಫ್ ತಾಲ್ಲೂಕು ಫಲಿತಾಂಶದಲ್ಲಿ ಜಿಲ್ಲೆಗೆ ಮೊದಲು ಬರಲು ಶಿಕ್ಷಕರಿಗೂ ಮಾರ್ಗದರ್ಶನ ನೀಡಲಾಗಿದೆ, ಮುಖ್ಯಶಿಕ್ಷಕರ ಸಭೆ ನಡೆಸಿ ಫಲಿತಾಂಶ ಉತ್ತಮಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚಿಸಲಾಗಿದೆ ಇದರ ಜತೆಗೆ ಮಕ್ಕಳ ಶ್ರದ್ಧೆಯಿಂದ ಓದಿ, ಸಾಧನೆಯ ಛಲದೊಂದಿಗೆ ತಾಲ್ಲೂಕಿಗೆ ಉತ್ತಮ ಫಲಿತಾಂಶ ತನ್ನಿ ಎಂದರು.
ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ಪರೀಕ್ಷಾ ಮಂಡಳಿ ಮಾ.೨೫ ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದು ನೀಡಿದ್ದ ತಾತ್ಕಾಲಿಕ ವೇಳಾಪಟ್ಟಿಯನ್ನೇ ಅಂತಿಮಗೊಳಿಸಿದ್ದು, ಅದೇ ದಿನಾಂಕ ಪರೀಕ್ಷೆ ಆರಂಭಗೊಳ್ಳಲಿದೆ ಎಂದು ಹೇಳಿದರು
ಇಲಾಖೆ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ‘ನನ್ನನ್ನೊಮ್ಮೆ ಗಮನಿಸಿ’ ಚಿತ್ರಬಿಡಿಸಿ ಅಂಕಗಳಿಸು, ಅಭ್ಯಾಸ ಹಾಳೆ ಸೇರಿದಂತೆ ವಿವಿಧ ಸಂಪನ್ಮೂಲ ಪುಸ್ತಕಗಳನ್ನು ಶಾಲೆಗೆ ಒದಗಿಸಿದೆ ಅದನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಗೆ ಉತ್ತಮ ಫಲಿತಾಂಶ ತನ್ನಿ ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಹನುಮನಹಳ್ಳಿ ಶಾಲೆ ಮುಖ್ಯಶಿಕ್ಷಕ ಬಿ.ಕೆ.ನಾಗರಾಜ್, ನಂಬಿಹಳ್ಳಿ ಶಾಲೆ ಶಿಕ್ಷಕ ಪಿ.ಎನ್.ಬಾಲಕೃಷ್ಣರಾವ್, ತೊರಲಕ್ಕಿ ಶಾಲೆ ಶಿಕ್ಷಕ ಗೋಪಾಲರಾವ್, ಕೆಜಿಎಫ್ ಶಿಕ್ಷಣ ಸಂಯೋಜಕ ಲಕ್ಷ್ಮೀಕಾಂತ್ ಮಕ್ಕಳೊಂದಿಗೆ ವಿಷಯವಾರು ಸಂವಾದ ನಡೆಸಿ ಮಕ್ಕಳ ಗೊಂದಲ ನಿವಾರಿಸಿದರು.
ಸಂವಾದದಲ್ಲಿ ಕೆಜಿಎಫ್ ನಗರದ ಅಂಬೇಡ್ಕರ್ ಬಾಲಕರು,ಬಾಲಕಿಯರ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಸೆಂಟ್ ಜೋಸೆಫ್ ಶಾಲೆ, ಬಿಜಿಎಂಎಲ್ ಪ್ರೌಢಶಾಲೆ, ಉರಿಗಾಂ ಪೇಟೆ ಸರ್ಕಾರಿ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಲಿ ಮಕ್ಕಳು ಪಾಲ್ಗೊಂಡಿದ್ದರು.