4.95 ಕೋಟಿ ರೂ.ಗಳ ಉಳಿತಾಯದ ಬಜೆಟ್ ಮಂಡನೆ

ಗದಗ30: ಗದಗ ಬೆಟಗೇರಿ ಅವಳಿ ನಗರಗಳ ನಗರಸಭೆಯ 2021-22 ನೇ ಸಾಲಿನ 224 ಕೋಟಿ ರೂ.ಗಳ ಆಯ-ವ್ಯಯವನ್ನು ನಗರಸಭೆ ಪೌರಾಯುಕ್ತ ರಮೇಶ ಜಾಧವ ಅವರು ಮಂಡಿಸಿದರು. ನಗರಸಭೆ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಮಂಡಿಸಿದ ಆಯವ್ಯಯವನ್ನು ಅನುಮೋದಿಸಿದರು.

ಗದಗ ಬೆಟಗೇರಿ ನಗರಸಭೆ ಸಭಾಂಗಣದಲ್ಲಿ ಜರುಗಿದ 2021-2022 ನೇ ಸಾಲಿನ ಆಯ-ವ್ಯಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ಆಯ-ವ್ಯಯದಲ್ಲಿ ಮುಖ್ಯವಾಗಿಆಸ್ತಿ ತೆರಿಗೆ, ಅಭಿವೃದ್ಧಿ ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ, ವಾಣಿಜ್ಯ ಸಂಕೀರ್ಣಗಳ ಬಾಡಿಗೆ, ಅಂಗಡಿಗಳ ಲೈಸೆನ್ಸ, ಖಾತಾ ನಕಲು ಶುಲ್ಕ, ಖಾತಾ ಬದಲಾವಣೆ ಶುಲ್ಕ, ಘನತಾಜ್ಯ ನಿರ್ವಹಣೆ ಶುಲ್ಕ, ನೀರು ಸರಬರಾಜು ಶುಲ್ಕ, ಹಾಗೂ ಸರ್ಕಾರದಿಂದ ನಿರ್ವಹಣಾ ಅನುದಾನದಿಂದ ಒಟ್ಟಾರೆ ರೂ.213.27 ಕೋಟಿಗಳ ಆದಾಯವನ್ನು ನಿರೀಕ್ಷಿಸಿದ್ದು, ರೂ.16.39 ಕೋಟಿಗಳ ಆರಂಭಿಕ ಶುಲ್ಕ ಬಳಸಿಕೊಂಡ ಸಾಮಾನ್ಯ ವೆಚ್ಚಗಳಿಗಾಗಿ, ಮೂಲ ಸೌಕರ್ಯ ನಿರ್ವಹಣೆ ಹಾಗೂ ದುರಸ್ತಿಗಾಗಿ ಹೊಸದಾಗಿ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ವಿದ್ಯುತ ದೀಪ, ಒಳ ಚರಂಡಿ, ಇತ್ಯಾದಿಗಳ ನಿರ್ಮಾಣ ಹಾಗೂ ಹಾಗೂ ಅಭಿವೃದ್ದಿಗಾಗಿ ಒಟ್ಟಾರೆ ರೂ.224.00 ಕೋಟಿಗಳ ವೆಚ್ಚಕ್ಕೆ ಅವಕಾಶ ಮಾಡಿಕೊಂಡು, ರೂ. 4.95 ಕೋಟಿಗಳ ಉಳಿತಾಯ ನಿರೀಕ್ಷಿಸಿ ಮಂಡಿಸಲಾದ ಆಯ-ವ್ಯಯವನ್ನು ಅನುಮೋದಿಸಲಾಗಿದೆ ಎಂದರು.

ಆಯ-ವ್ಯಯದಲ್ಲಿ ಆದಾಯಕ್ಕನುಗುಣವಾಗಿ ರಸ್ತೆ, ಚರಂಡಿ, ಬೀದಿ ದೀಪ, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಘನತ್ಯಾಜ್ಯ ನಿರ್ವಹಣೆ, ಉದ್ಯಾನವನ ನಿರ್ವಹಣೆ, ಕುಡಿಯುವ ನೀರು, ಒಳಚರಂಡಿ ಹೀಗೆ ಸಾರ್ವಜನಿಕರಮೂಲ ಸೌಕರ್ಯದಿಂದ ಗಮನದಲ್ಲಿರಿಸಿಕೊಂಡು ಅಭಿವೃದ್ದಿಗಾಗಿ ವೆಚ್ಚಕ್ಕೆ ಅವಕಾಶ ಮಾಡಿಕೊಳ್ಳಲಾಗಿದ್ದು ಹಾಗೂ ವಿಶೇಷವಾಗಿ ಪರಿಶಿಷ್ಠ ಜಾತಿ /ಪರಿಶಿಷ್ಠ ಪಂಗಡ ಜನಾಂಗದವರಿಗೆ ವಿಶೇಷ ಘಟಕದಡಿ ಸೌಲಭ್ಯ ಕಲ್ಪಿಸಲು ಹಾಗೂ ವಿಶೇಷ ಚೇತನದ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಅಳವಡಿಸಿದ್ದು, ಸಮಾಜದಲ್ಲಿ ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಸಮುದಾಯ ಹಾಗೂ ವೈಯಕ್ತಿಕವಾಗಿ ಸೌಲಭ್ಯ ಕಲ್ಪಿಸಲು ಆಯ-ವ್ಯಯದಲ್ಲಿ ಅವಕಾಶ ಕಲ್ಪಿಸಿರುವುದಾಗಿಯೂ ಸಭೆಗೆ ತಿಳಿಸಿ ಸಾರ್ವಜನಿಕರ, ಜನ ಪ್ರತಿನಿಧಿಗಳ, ಸಂಘ-ಸಂಸ್ಥೆಗಳ, ಹಿರಿಯರ ಎಲ್ಲ ಸಲಹೆ ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು ತಯಾರಿಸಿದ ಆಯ-ವ್ಯಯದಲ್ಲಿ ಅಳವಡಿಸಲಾದ ಎಲ್ಲ ಕಾರ್ಯಕ್ರಮಗಳನ್ನು ನಿಗದಿತ ಅವಧಿಯೊಳಗೆ ಸಾರ್ವಜನಿಕರಿಗೆ ತಲುಪುವಂತೆ ಕ್ರಮ ವಹಿಸಲು ಸೂಚಿಸಿದರು.

ಆಯವ್ಯಯದ ಮಂಡನೆಗೂ ಮುನ್ನ ನಗರಸಭೆ ಪೌರಾಯುಕ್ತ ರಮೇಶ ಜಾಧವ ಮಾತನಾಡಿ ನಗರಸಭೆಯ 2019-20 ನೇ ಸಾಲಿನ ವಾಸ್ತವಿಕ, 2020-21 ನೇ ಸಾಲಿನ ಪರಿಷ್ಕøತ ಹಾಗೂ 2021-22 ನೇ ಸಾಲಿನ ಆಯ-ವ್ಯಯವನ್ನು, ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಗಳಲ್ಲಿ ಚರ್ಚಿಸಿ, ವಿವಿಧ ಸಂಘ ಸಂಸ್ಥೆಗಳಿಂದ ಬಂದಂತಹ ಪ್ರಸ್ತಾವನೆಗಳನ್ನು ಪರಿಗಣಿಸಿ, ವಿವಿಧ ಶಾಖೆಗಳಿಂದ ಸಂಬಂದಿಸಿದ ಆದಾಯ/ಸ್ವೀಕೃತಿ ಹಾಗೂ ವ್ಯಯ/ಪಾವತಿಗಳ ಬಗ್ಗೆ ಅಂಕಿ ಅಂಶಗಳನ್ನು ಕ್ರೋಢಿಕರಿಸಿ, ಆಯ-ವ್ಯಯವನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಭಾರ ಯೋಜನಾ ನಿರ್ದೇಶಕ ಅನಿಲಕುಮಾರ ಮುದ್ದಾ, ಪೌರಾಯುಕ್ತ ರಮೇಶ ಪಿ ಜಾಧವ, ಲೆಕ್ಕಾಧೀಕ್ಷಕ, ಟಿ ಹೆಚ್ ದ್ಯಾವನೂರ ಹಾಗೂ ನಗರಸಭೆಯ ಇನ್ನಿತರ ಅಧಿಕಾರಿ/ಸಿಬ್ಬಂದಿ ಹಾಗೂ ಯೋಜನಾ ನಿರ್ದೇಶಕರ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.