4.37 ಎಕರೆ ಜಾಗದಲ್ಲಿ ನಿವೇಶ ರಹಿತರಿಗೆ ಮನೆ ನಿರ್ಮಾಣ


ಹೊಸಪೇಟೆ(ವಿಜಯನಗರ),ಜು.17: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ ಅವರು ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿದರು.
ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಗ್ರಾಮದೆಲ್ಲೆಡೆ ಸಂಚರಿಸಿ ರಸ್ತೆಗಳು, ಚರಂಡಿ, ಸ್ವಚ್ಛತೆ ಹಾಗೂ ಇನ್ನೀತರ ಮೂಲಸೌಕರ್ಯ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು.
ನಾಗೇನಹಳ್ಳಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಡುಗೆ ಕೋಣೆ, ಶೌಚಾಲಯವನ್ನು ಪರಿಶೀಲಿಸಿದಾಗ ಎಲ್ಲವೂ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ನಂತರ ಗ್ರಂಥಪಾಲಕರನ್ನು ವಿಚಾರಿಸಿ, ಗ್ರಂಥಾಲಯದ ಕುರಿತು ಸಮಸ್ಯೆಗಳನ್ನು ಅಲಿಸಿದರು.
ನಾಗೇನಹಳ್ಳಿಯ ಎರಡು ಸಾಮೂಹಿಕ ಶೌಚಾಲಯಗಳನ್ನು ವಿಕ್ಷಿಸಿದ ಡಿಸಿ ಅವರು  ಶೌಚಾಲಯಗಳು ದುರಸ್ತಿಗೊಂಡಿದ್ದು, ಪಕ್ಕದಲ್ಲಿಯೇ ನೂತನ ಸಾಮೂಹಿಕ ಶೌಚಾಲಯವನ್ನು ನಿರ್ಮಿಸಿ ನಂತರ ಹಳೆಯ ಶೌಚಾಲಯ ರಿಪೇರಿ ಮಾಡಿಸಲು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ಈ ಗ್ರಾಮವಾಸ್ತವ್ಯ ನಡೆಸುವುದಕ್ಕಿಂತ ಕೆಲವು ದಿನಗಳ ಮುಂಚೆಯೇ ಗ್ರಾಮಕ್ಕೆ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಪಿಂಚಣಿ, ಪಹಣಿ, ದಾಖಲೆಗಳ ತಿದ್ದುಪಡಿ, ರೇಶನ್ ಕಾರ್ಡ್ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ ಅವರು ತಿಳಿಸಿದರು.
28 ಜನ ವೃದ್ಧರನ್ನು ವಯಸ್ಕರ ಪಿಂಚಣಿ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಇದರಲ್ಲಿ 25 ಜನ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಪಿಂಚಣಿ ಪ್ರಮಾಣ ಪತ್ರವನ್ನು ನೀಡಲಾಯಿತು. ಪೋಷಣ್ ಭಾರತ್ ಹಾಗೂ ನಿಪುಣ್ ಭಾರತ್ ಅಭಿಯಾನದಡಿ ಗರ್ಭಿಣಿ ಮಹಿಳೆಯರಿಗೆ ಶೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಸನ ಕಾರ್ಯಕ್ರಮ ಮಾಡಲಾಯಿತು.
ನಾಗೇನಹಳ್ಳಿಯಲ್ಲಿ ಕೆಲವು ಜನರಿಗೆ ನಿವೇಶನ ಇಲ್ಲದವರು ಅರ್ಜಿ ಸಲ್ಲಿಸಿದ್ದು, ಅವರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ಕಟ್ಟಿಸಿ ಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಗ್ರಾಮದಲ್ಲಿ ಹೈಸ್ಕೂಲ್, ಪಹಣಿ, ನಿವೇಶನ, ನೂತನ ಮನೆ, ಶೌಚಾಲಯ, ಇನಾಮು ರದ್ದತಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರುಗಳನ್ನು ಪ್ರಸ್ತಾಪಿಸಿದರು.
ಎಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಡಿಸಿ ಅನಿರುದ್ಧ್ ಶ್ರವಣ್  ಅವರು ತಮ್ಮ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಜನರಿಗೆ ಅಶ್ವಾಸನೆ ನೀಡಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಾಗೇನಹಳ್ಳಿ ಗ್ರಾಮವು ಹೊಸಪೇಟೆ ಹತ್ತಿರದಲ್ಲಿದ್ದರೂ ಸಹ ಎಲ್ಲಾ ಗ್ರಾಮಗಳಂತೆ ಇಲ್ಲಿಯೂ ಹೆಚ್ಚಿನ ಸಮಸ್ಯೆಗಳಿದ್ದು ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದರು.
ನಿವೇಶನ ಇಲ್ಲದವರಿಗಾಗಿ ನಾಗೇನಹಳ್ಳಿಯಲ್ಲಿ 4.37ಎಕರೆ ಜಾಗದಲ್ಲಿ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ ಎಂದರು.
ಇನ್ನೂ 5-6 ತಿಂಗಳಲ್ಲಿ ಊರಿನ ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಿಡಿಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸುವಂತೆ ಈ ಸಂದರ್ಭದಲ್ಲಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ನಿಮಿತ್ತ ವೇದಿಕೆ ಆವರಣದಲ್ಲಿ ಹಾಕಲಾಗಿದ್ದ ಆಯುಷ್ಯ ಆರೋಗ್ಯ ಮೇಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಅಭಿಯಾನ, ಕೋವಿಡ್ ಲಸಿಕಾಕರಣ ಅಮೃತ ಮಹೋತ್ಸವ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕ್ಷಯರೋಗದ ಕುರಿತು ಜಾಗೃತಿ ಅಭಿಯಾನ,  ಕೃಷಿ-ತೋಟಗಾರಿಕೆ ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನದ ಸ್ಟಾಲ್‍ಗಳನ್ನು ಹಾಕಲಾಗಿತ್ತು.
ಈ ಸಂದರ್ಭದಲ್ಲಿ ಡಿಡಿಎಲ್‍ಆರ್ ಕುಸುಮಾ, ಹೊಸಪೇಟೆ ತಾ.ಪಂ.ಇಒ ರಮೇಶ, ಕ್ಷಯರೋಗ ನುರ್ಮೂಲನಾಧಿಕಾರಿ ಜಗದೀಶ್, ತಹಶೀಲ್ದಾರ್ ವಿಶ್ವಜಿತ್ ಮೆಹತಾ, ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಲಕ್ಷ್ಮೀ, ಉಪಾಧ್ಯಕ್ಷೆ ವೈ.ಜ್ಯೋತಿ,   ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಬೆಣ್ಣೆ ಬಸವರಾಜ, ಪ್ರಭಾರ ಸಿಡಿಪಿಒ ತಿಮ್ಮಪ್ಪ, ಕಮಲಾಪುರ ಗ್ರೇಟ್-2 ತಹಶಿಲ್ದಾರ್ ಅಮರನಾಥ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಇದ್ದರು.