4 ವರ್ಷಗಳಿಂದ ಆರಂಭವೇ ಆಗದ ಅರಕೇರಾ ಕೆ. ಗ್ರಾಮದ ಆರ್.ಓ. ಪ್ಲಾಂಟ್;ದೂರು

ಯಾದಗಿರಿ: ನ.10:ತಾಲ್ಲೂಕಿನ ಅರಕೇರಾ ಕೆ. ಗ್ರಾಮದಲ್ಲಿ ಕುಡಿವ ನೀರಿನ ಆರ್.ಓ. ಪ್ಲಾಂಟ್ ಕಳೆದ ನಾಲ್ಕು ವರ್ಷಗಳಿಂದ ಆರಂಭವೇ ಮಾಡದೇ ಬೀಳು ಬೀಳುವಂತೆ ಮಾಡಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ.

ಈ ಕುರಿತು ಎಲ್ಲ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಮತ್ತು ಸ್ಥಳೀಯ ಶಾಸಕರಿಗೂ ಎರಡು ಬಾರಿ ಗ್ರಾಮಕ್ಕೆ ಆಗಮಿಸಿದ ವೇಳೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿದೆ ಆದರೆ ಕೆಲಸ ಮಾತ್ರ ಆಗಿಲ್ಲ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೂ ಸಹ ಮನವಿ ಸಲ್ಲಿಸಿದ್ದರೂ ಇದುವರೆಗೆ ಪ್ರಯೋಜನವಾಗಿಲ್ಲ.

ಗ್ರಾಮದಲ್ಲಿ ಶುದ್ಧ ಕುಡಿವ ನೀರು ಲಭ್ಯತೆ ಇಲ್ಲದಿರುವುದರಿಂದ ಆದ್ಯತೆಯ ಮೇರೆಗೆ ಈ ಕೆಲಸ ಮಾಡಬೇಕೆಂದು ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಭೀಮರಾಯ ಭಂಡಾರಿ ಆಗ್ರಹಿಸಿದ್ದಾರೆ.

ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.