4 ಲಕ್ಷ ರೂಗಳಿದ್ದ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿ

ಕಲಬುರಗಿ,ಆ.16-ನಾಲ್ಕು ಲಕ್ಷ ರೂಪಾಯಿಗಳಿದ್ದ ಹಣದ ಬ್ಯಾಗ್ ಕೈಯಲ್ಲಿ ಹಿಡಿದುಕೊಂಡು ನಡೆದುಕೊಂಡು ಹೊರಟಿದ್ದ ವ್ಯಕ್ತಿಯೊಬ್ಬರಿಂದ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಶಹಾಬಜಾರ್ ನಾಕಾ ಬಳಿ ನಡೆದಿದೆ.
ಆಳಂದ ತಾಲ್ಲೂಕಿನ ವಿ.ಕೆ.ಸಲಗರ ಗ್ರಾಮದ ಭಾರತ್ ಗ್ಯಾಸ್ ಕಂಪನಿಯಲ್ಲಿ ಗೋಡಾನ್ ಇನ್‍ಚಾರ್ಜ್ ಆಗಿ ಕೆಲಸ ಮಾಡುತ್ತಿರುವ ವಿ.ಕೆ.ಸಲಗರ ಗ್ರಾಮದ ದಯಾನಂದ ಮದನಕರ (53) ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
ದಯಾನಂದ ಮದನಕರ ಅವರು ವಿ.ಕೆ.ಸಲಗರ ಗ್ರಾಮದವರಾದ ದೀಪಕ್ ಖೇಡ್ಲ ಎಂಬುವವರಿಗೆ ಕೈಗಡವಾಗಿ 9 ಲಕ್ಷ ನೀಡಿದ್ದರು. ಅದರಲ್ಲಿ ಅವರು ಮೊದಲು 5 ಲಕ್ಷ ನಂತರ 4 ಲಕ್ಷ ರೂ. ಮರಳಿ ನೀಡಿದ್ದರು.
ಆ.14 ರಂದು ದೀಪಕ್ ಅವರು ಮರಳಿ ನೀಡಿದ್ದ 4 ಲಕ್ಷ ರೂ.ತೆಗೆದುಕೊಂಡು ದಯಾನಂದ ಮದನಕರ್ ಊರಿಗೆ ಹೊರಟಿದ್ದರು. ಅವರನ್ನು ಆಳಂದ ನಾಕಾವರೆಗೆ ಬೈಕ್ ಮೇಲೆ ಬಿಟ್ಟು ಬರುವಂತೆ ದೀಪಕ್ ಅವರ ವಾಹನ ಚಾಲಕ ಮುಸ್ತಾಫ್ ಅವರಿಗೆ ಹೇಳಿದ್ದರು. ಬೈಕ್ ಚಾಲೂ ಆಗದೇ ಇರುವುದರಿಂದ ದಯಾನಂದ ಮದನಕರ್ ಮತ್ತು ಮುಸ್ತಾಫ್ ಅವರು ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಮೇಲೆ ಬಂದ 30 ರಿಂದ 35 ವರ್ಷದ ಇಬ್ಬರು ಅಪರಿಚಿತರು 4 ಲಕ್ಷ ರೂ.ಗಳಿದ್ದ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ದಯಾನಂದ ಮದನಕರ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.