4 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು 3,523 ಸಾವು

ನವದೆಹಲಿ,ಮೇ.೧-ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ನಿಯಂತ್ರಣ ತಪ್ಪಿದೆ.ಇದರಿಂದಾಗಿ ದಿನದಿಂದ ದಿನಕ್ಕೆ ದಾಖಲೆ ಸೋಂಕು ಕಾಣಿಸಿಕೊಳ್ಳುವ ಮೂಲಕ ದೇಶವನ್ನು ಜಾಗತಿಕ ಮಟ್ಟದಲ್ಲಿ ಆತಂಕದಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ.ಸೋಂಕು ನಿಯಂತ್ರಣ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ದಿಕ್ಕೆ ತೋಚದಂತಾಗಿದೆ.
ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ ೩ ಲಕ್ಷ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಗತ್ತಿನಲ್ಲಿ ಒಂದೇ ದಿನ ದಾಖಲಾದ ಸೋಂಕಿನಲ್ಲಿ ದಾಖಲೆ ಬರೆದಿತ್ತು. ಇದೀಗ ಮೇ ಮೊದಲ ದಿನ ೪ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಹಿಂದಿನ ಎಲ್ಲಾ ದಾಖಲೆ ಬದಿಗೊತ್ತಿ ವಿಶ್ವದಲ್ಲಿ ಅತಿ ಹೆಚ್ಚಿನ ಮಂದಿಗೆ ಸೋಂಕು ತಗುಲಿದೆ. ಇದು ಕೇಂದ್ರ ರಾಜ್ಯ ಸರ್ಕಾರಗಳನ್ನು ಬೆಚ್ಚಿಬಿಳಿಸಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೪ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದು ಜಗತ್ತಿನ ಎಲ್ಲಾ ದೇಶಗಳಿಗೆ ಹೋಲಿಸಿದರೆ ಒಂದೇ ದಿನ ದಾಖಲಾದ ಅತ್ಯಧಿಕ ಸೋಂಕು ಸಂಖ್ಯೆ ಇದಾಗಿದೆ. ದಿನದಿಂದ ದಿನಕ್ಕೆ ಸೋಂಕು ಅಂಕೆ ಸಿಗದೆ ರಾಕೇಟ್ ವೇಗದಲ್ಲಿ ಹೆಚ್ಚಾಗುತ್ತರುವ ಹಿನ್ನೆಲೆಯಲ್ಲಿ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸೋಂಕು ಹೆಚ್ಚುತ್ತಿರುವ ಪರಿಗೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಹಾಸಿಗೆ, ಆಮ್ಲಜನಕ, ರೆಮಿಡಿಸಿವಿರ್ ಔಷಧಿ ಸೇರಿದಂತೆ ಇನ್ನಿತರೆ ವೈದ್ಯಕೀಯ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗದೆ ಸ್ಥಿತಿ ಎದುರಾಗಿದೆ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ.
೪,೦೧ ಲಕ್ಷ ಹೊಸ ಸೋಂಕು:
ಇಂದು ಬೆಳಗ್ಗೆ ೮ ಗಂಟೆಯ ತನಕ ೪,೦೧,೯೯೩ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ೩,೫೨೩ ಮಂದಿ ಸಾವನ್ನಪ್ಪಿದ್ದಾರೆ. ಸಾವು ಮತ್ತು ಸೋಂಕು ದಾಖಲೆಯಲ್ಲಿ ಭಾರತ ಮತ್ತೊಮ್ಮೆ ಜಗತ್ತಿನದಲ್ಲಿ ದಾಖಲೆ ಬರೆದಿದೆ.
ಜೊತೆಗೆ ಕಳೆದ ೨೪ ಗಂಟೆಯಲ್ಲಿ ೨,೯೯,೯೮೮ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ ೧,೯೧,೬೪,೯೬೯ ಮಂದಿಗೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಚೇತರಿಕೆಯ ಸಂಖ್ಯೆ ೧,೫೬,೮೪,೪೦೬ಕ್ಕೆ ಹೆಚ್ಚಳವಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ೨,೧೧,೮೫೩ ಮಂದಿಗೆ ಏರಿಕೆಯಾಗಿದೆ.
ದೇಶದಲ್ಲಿ ನಿತ್ಯ ಏರಿಕೆಯಾಗುತ್ತಿರುವ ಸೋಂಕು ಸಂಖ್ಯೆ ಪೈಕಿ ಮಹಾರಾಷ್ಟ್ರ, ಕರ್ನಾಟಕದಲ್ಲಿ ದಾಖಲೆಯ ಮೇಲೆ ದಾಖಲೆ ಸೋಂಕು ಧೃಡಪಡುತ್ತಿದೆ,ಇದರಿಂದಾಗಿ ದೇಶದಲ್ಲಿ ಒಂದೇ ದಿನ ೪ ಲಕ್ಷ ಗಡಿ ದಾಟುವಂತಾಗಿದೆ.

ಕಳೆದ ೨೪ ಗಂಟೆಗಳಲ್ಲಿ ೧೯,೪೫,೨೯೯ ಮಂದಿಗೆ ದೇಶದಲ್ಲಿ ಕೊರೊನಾ ಸೋಂಕು ಪತ್ತೆ ಮಾಡಿದ್ದು ಇದುವರೆಗೆ ದೇಶದಲ್ಲಿ ೨೮,೮೩,೩೭,೩೮೫ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ- ಐಸಿಎಂಆರ್ ತಿಳಿಸಿದೆ.

೩೨.೬೮ ಲಕ್ಷ ಸಕ್ರಿಯ ಪ್ರಕರಣ
ದೇಶದಲ್ಲಿ ನಿತ್ಯ ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕು ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩೨ ಲಕ್ಷ ಗಡಿ ದಾಟಿದೆ. ಇದರಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕಿತರಿಗೆ ಮೂಲ ಸೌಕರ್ಯ ಕಲ್ಪಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸದ್ಯ ದೇಶದಲ್ಲಿ ೩೨,೬೮,೭೧೦ ಮಂದಿಗೆ ಸಕ್ರಿಯ ಪ್ರಕರಣಗಳಿದ್ದು ಈ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ದೇಶದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದುವರೆಗೆ ೧೫,೪೯,೮೯,೬೩೫ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

೧೦ ರಾಜ್ಯಗಳಲ್ಲಿ ಅಧಿಕ: ಅಸಹಾಯಕತೆ
ದೇಶದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದ್ದು ಅದರಲ್ಲಿ ೧೦ ರಾಜ್ಯಗಳಲ್ಲಿ ಹೆಚ್ಚಿದೆ. ಮಹಾರಾಷ್ಟದಲ್ಲಿ ಹೊಸದಾಗಿ ೬೨,೯೧೯ ಮಂದಿಗೆ ಸೋಂಕು ಮತ್ತು ೮೨೮ ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ೪೮,೨೬೯ ಮಂದಿಗೆ ಸೋಂಕು ಕಾಣಿಸಿಕೊಂಡು ೨೧೭ ಮಂದಿ ಸಾವನ್ನಪ್ಪಿದ್ಧಾರೆ.
ಉಳಿದಂತೆ ಉತ್ತರ ಪ್ರದೇಶ,ಕೇರಳ,ರಾಜಸ್ತಾನ ಗುಜರಾತ್,ಛತ್ತೀಸ್‌ಘಡ,ಆಂದ್ರ ಪ್ರದೇಶ,ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ತಿಳಿಸಿದ್ಧಾರೆ.
ನಿತ್ಯ ಸೋಂಕು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಮೂಲಕ ಸೌಕರ್ಯ ಒದಗಿಲು ಸಾದ್ಯವಾಗುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.