4 ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ಮುಗಿ ಬಿದ್ದು ತರಕಾರಿ, ದಿನಸಿ, ಮದ್ಯ ಖರೀದಿಸಿದರು

ಬಳ್ಳಾರಿ ಮೇ 19 : ಜಿಲ್ಲೆಯಾದ್ಯಂತ ಬರುವ ಸೋಮವಾರ ಮೇ 24 ಬೆಳಿಗ್ಗೆ 6 ವರೆಗೆ ಸಂಪೂರ್ಣ ಲಾಕ್‌ಡೌನ್ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನಗರದ ಮಾರುಕಟ್ಟೆಯಲ್ಲಿ ಜನತೆ. ಸಾಮಾಜಿಕ ಅಂತರ, ಕರೋನಾ ಬೀತಿ ಮರೆತು ಮುಗಿಬಿದ್ದು, ದಿನಸಿ, ತರಕಾರಿ, ಮದ್ಯ ಖರೀದಿ‌ ಮಾಡಿದ್ದು ಕಂಡು ಬಂತು.

ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನ, ದೊಡ್ಡ ಮಾರುಕಟ್ಟೆ, ಐಟಿಐ ಕಾಲೇಜು‌ಮೈದಾನ, ಬಸವೇಶ್ವರ ನಗರ ಸರ್ಕಲ್, ಮೊದಲಾದ ಕಡೆಯ ತರಕಾರಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಜನರ ಸಂಖ್ಯೆ ಹೆಚ್ಚಿದಂತೆ ತರಕಾರಿ ಬೆಲೆಯನ್ನು ಸಹ ಹೆಚ್ಚಿಸಿತ್ತು.

ತರಕಾರಿಯನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಖರೀದಿ‌ಮಾಡಿ. ತಳ್ಳುವ ಗಾಡಿಯಲ್ಲಿ ಓಣಿ ಓಣಿಗಳಲ್ಲಿ ಮಾರಾಟ ಮಾಡಲಾಗುತ್ತದೆಂದು ಜಿಲ್ಲಾಡಳಿತ ಹೇಳಿದ್ದರು. ಜನ ನಾಳೆಯಿಂದ ಸಿಗುತ್ತವೋ, ಇಲ್ಲವೋ ಎಂಬಂತೆ ಖರೀದಿ‌ ಮಾಡಿದರು.

ಇದರಿಂದಾಗಿ
ಬೆಳಿಗ್ಗೆ 8 ಗಂಟೆಯ ವೇಳೆಗೆ ಬಹಳಷ್ಟು ತರಕಾರಿ, ಪಲ್ಲೆ ಖಾಲಿಯಾಗಿದ್ದವು. ಅಳಿದುಳಿದನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದು ಕಂಡು ಬಂತು.

ನಗರದ ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಜನಜಂಗುಳಿ,‌ ವಾಹನ‌ ದಟ್ಟಣೆ ದಿನಕ್ಕಿಂತಲೂ ಹೆಚ್ಚಿತ್ತು. ಕೆಲವುಕಡೆ ಟ್ರಾಫಿಕ್ ಜಾಮ್ ಸಹ ಆಗಿತ್ತು.

ಇನ್ನು ಮದ್ಯದ ಅಂಗಡಿಗಳಲ್ಲಿ ಇನ್ನೂ ಐದು ದಿನಗಳಿಗೆ ಬೇಕಾದಷ್ಟನ್ನು ಮದ್ಯ ಪ್ರಿಯರು, ಚಿಲ್ಲರೆ ಮಾರಾಟಗಾರರು ಮದ್ಯದ ಅಂಗಡಿಗಳಿಂದ ಹೆಚ್ವಿನ ಮಾಲನ್ನು ಖರೀದಿಸಿದರು.
ಅನಂತಪುರಂ ರಸ್ತೆಯಲ್ಲಿರುವ ಎಂ.ಎಸ್.ಪಿ.ಎಲ್ ಮಳಿಗೆಯಲ್ಲಿ ಎಂ.ಆರ್.ಪಿ ಗಿಂತ ಐದು ರೂ ಬೆಲೆಗೆ ಮಾರಾಟ ಮಾಡುತ್ತಿದ್ದರು. ಯಾಕೆ ಹೆಚ್ಚು ಬೆಲೆ ಎಂದು ಪ್ರಶ್ನೆ ಮಾಡಿದವರಿಗೆ ಸರಿಯಾದ ಬೆಲೆಗೆ ಕೊಡುತ್ತಿದ್ದರು.

ಬೆಳಿಗ್ಗೆ 9.30 ರಿಂದ ಹತ್ತುಗಂಟೆ ಸಮಯದಲ್ಲಿ‌ ಮಾತ್ರ ಮದ್ಯದ ಅಂಗಡಿಗಳ ಮುಂದೆ ರಷ್ ಹೆಚ್ಚಿತ್ತು.

ಅಂತೂ ಇನ್ನೂ ನಾಲ್ಕು ದಿನಗಳ ಕಾಲ ಅಂದರೆ ಬರುವ ಸೋಮವಾರದ ವರೆಗೆ ಜಿಲ್ಲೆಯಲ್ಲಿ ಇಂತಹ ಜನ ಜಂಗುಳಿಗೆ ಬ್ರೇಕ್ ಬೀಳಲಿದೆ.