4 ಕ್ಷೇತ್ರಗಳಲ್ಲಿ ಕಿಚ್ಚನ ಸಂಚಾರ: ಅಭಿಮಾನಿ ಎದೆಗೆ ಆಟೋಗ್ರಾಫ್

ಚಾಮರಾಜನಗರ, ಮೇ.06:- ಕಳೆದ 15 ದಿನಗಳಿಂದ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿರುವ ಚಿತ್ರನಟ ಸುದೀಪ್ ಇಂದು ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ನಡೆಸಿದರು.
ಮೈಸೂರು ಮೂಲಕ ಮೊದಲಿಗೆ ಗುಂಡ್ಲುಪೇಟೆಗೆ ಎಂಟ್ರಿ ಕೊಟ್ಟ ಕಿಚ್ಚನಿಗೆ ಸಹಸ್ರಾರು ಅಭಿಮಾನಿಗಳು ಜಮಾಯಿಸಿ ಭರ್ಜರಿ ಪ್ರತಿಕ್ರಿಯೆಯನ್ನೇ ಕೊಟ್ಟರು. 15 ನಿಮಿಷ ರೋಡ್ ಶೋ ನಡೆಸಿದ ನಟ ಸುದೀಪ್, ಗೆದ್ದೇ ಗೆಲ್ಲೆವೆವು ಒಂದು ದಿನ- ಗೆಲ್ಲಲೇಬೇಕು ಒಳ್ಳೆತನ ಎಂದು ಮಾತು ಆರಂಭಿಸಿದ ಅವರು, ನೆವರ್ ಗಿವ್ ಅಪ್ ರೀತಿ ಸತತವಾಗಿ ಸೋತರು ಗೆದ್ದ ನಿರಂಜನಕುಮಾರ್ ಈ ಬಾರಿಯೂ ಗೆಲ್ಲಿಸಿಕೊಡಬೇಕೆಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ಅಭಿಮಾನಿಗೆ ಎದೆಗೆ ಆಟೋಗ್ರಾಪ್
ಗುಂಡ್ಲುಪೇಟೆಯಲ್ಲಿ ನೆಚ್ಚಿನ ನಟನನ್ನು ಕಾಣಲು ಆಭಿಮಾನಿ ಸಮೂಹವೇ ನೆರೆದಿತ್ತು. ಈ ವೇಳೆ, ಪ್ರಚಾರ ವಾಹನ ಹತ್ತಿದ ಹೊಸೂರಿನ ಅಜಿತ್ ಕುಮಾರ್ ಎಂಬ ಅಭಿಮಾನಿ ಎದೆ ಮೇಲೆ ಸುದೀಪ್ ಆಟೋಗ್ರಾಪ್ ಹಾಕಿದರು.
ಕಿಚ್ಚ ಎಂದವನಿಗೆ ನೀರು ಕೊಟ್ಟ ಸುದೀಪ್ :
ಗುಂಡ್ಲುಪೇಟೆ ಪಟ್ಟಣದ ಪುನೀತ್ ಹಾಗೂ ಇನ್ನಿತರ ಅಭಿಮಾನಿಗಳು ತಂದಿದ್ದ ತಮ್ಮ ಫೆÇೀಟೋಗಳಿಗೆ ಹಸ್ತಾಕ್ಷಾರ ಹಾಕಿ ಗಮನ ಸೆಳೆದ ಸುದೀಪ್; ಕಿಚ್ಚ ಕಿಚ್ಚ ಎಂದು ಕೂಗುತ್ತಿದ್ದ ಅಭಿಮಾನಿಗೆ ತಮ್ಮ ವಾಟರ್ ಬಾಟೆಲ್‍ನ್ನು ಉಡುಗೊರೆಯಾಗಿ ಎಸೆದರು.
ಚಾಮರಾಜನಗರದಲ್ಲಿ ಕಿಚ್ಚ ಮೇನಿಯ- ಆಯತಪ್ಪಿ ಬಿದ್ದ ಸೋಮಣ್ಣ :
ಗುಂಡ್ಲುಪೇಟೆ ಪ್ರಚಾರದ ಬಳಿಕ ಚಾಮರಾಜನಗರಕ್ಕೆ ಎಂಟ್ರಿಕೊಟ್ಟ ಸುದೀಪ್ ಸೋಮಣ್ಣ ಪರ ಪ್ರಚಾರ ನಡೆಸಿದರು. ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿ ಸುದೀಪ್ ಅವರನ್ನು 5 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳು ಜಮಾಯಿಸಿ ಕಿಚ್ಚನಿಗೆ ಸ್ವಾಗತ ಕೋರಿದರು. ಪ್ರಚಾರದ ವೇಳೆ ಕಾರಿನ ಮೇಲೆ ನಿಂತಿದ್ದ ಸೋಮಣ್ಣ ಆಯತಪ್ಪಿ ಬೀಳುತ್ತಿದ್ದಾಗ ಸುದೀಪ್ ಕೈ ಹಿಡಿದೆತ್ತಿ ಅವಘಡ ತಪ್ಪಿಸಿದರು. ಅಭಿಮಾನಿಯೋರ್ವ ಕಾರನ್ನು ಏರಿ ಸುದೀಪ್ ಮುಟ್ಟಲು ಪ್ರಯತ್ನಿಸಿದಾಗ ಈ ಅವಘಡ ಉಂಟಾಯಿತು. ಚಾಮರಾಜನಗರದ ಬಳಿಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಯಳಂದೂರು ಮತ್ತು ಹನೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು.
ಕಿಚ್ಚ ಹೋದಲೆಲ್ಲಾ ಕ್ರೇನ್ ಮೂಲಕ ಸೇಬು, ಹೂವಿನ ಹಾರಗಳನ್ನು ಹಾಕಿ ಅಭಿಮಾನಿಗಳು ಖುಷಿಗೊಂಡರು. ಇನ್ನು, ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ನಿಯಂತ್ರಣಿಸಲು ಪೆÇಲೀಸರು ಲಾಠಿ ರುಚಿ ತೋರಿಸಬೇಕಾಯಿತು.
ಸುದೀಪ್ ಬಿರುಗಾಳಿ ಎಂದ ಬಿಜೆಪಿ ಶಾಸಕ :
ನಟ ಸುದೀಪ್ ಗುಂಡ್ಲುಪೇಟೆಗೆ ಬಂದು ರೋಡ್ ಶೋ ಮಾಡಿದ್ದು ನೆಚ್ಚಿನ ನಟನನ್ನು ಕಂಡು ಯುವ ಸಮೂಹ ಪುಳಕಿತರಾದರು. ಯುವಸಮೂಹ ಇಂದು ಸುದೀಪ್ ಕಂಡು ಸಂಭ್ರಮಿಸಿದ್ದಾರೆ, ಸುದೀಪ್ ಬಂದ ನಂತರ ಸುದೀಪ್ ಬಿರುಗಾಳಿ ಎದ್ದಿದೆ, ಬಿಜೆಪಿಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿದೆ ಎಂದು ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್ ಹೇಳಿದರು.
ಈಗಾಗಾಲೇ ನಾನು ಪಾದಯಾತ್ರೆ ಮೂಲಕ ಊರೂರಿಗೆ ಭೇಟಿ ಕೊಟ್ಟು ಮತಯಾಚಿಸಿದ್ದು ಬಿಜೆಪಿ ಪರ ಅಲೆ ಇದೆ. ಊರುಗಳ ವಾಸ್ತವ ಸ್ಥಿತಿ ಅರ್ಥವಾಗಿದೆ, ಕೈ ಅಭ್ಯರ್ಥಿ ಒಂದು ಊರಿನಲ್ಲೂ ಪಾದಯಾತ್ರೆ ಮಾಡಿಲ್ಲ, ಆಟೋ ಮೇಲೆ ಹತ್ತಿ ಟಾಟಾ ಮಾಡಿಕೊಂಡು ಹೋಗಿದ್ದಾರೆ, ಹೀಗಾದರೇ ಜನರ ಕಷ್ಟ ಏನು ಅರ್ಥ ಆಗಲಿದೆ ಎಂದು ಜನರೇ ಮಾತಾಡಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ಕೊಟ್ಟು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರಗಳಲ್ಲಿ ಸುದೀಪ್ ಹೇಳಿದಿಷ್ಟು:
ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ ಕಿಚ್ಚ ಸುದೀಪ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇನ್ನು, ಪ್ರಚಾರಗಳ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ನಾನು ಚಿತ್ರರಂಗದಲ್ಲಿ ಇವತ್ತು ಸಹ ಬಣ್ಣಹಚ್ಚಲು ನಿಮ್ಮ ಈ ಪ್ರೀತಿ ಅಭಿಮಾನವೇ ಕಾರಣ ನಿಮ್ಮ ಈ ಋಣವನ್ನ ನಾನೆಂದಿಗೂ ತೀರಿಸಲು ಸಾಧ್ಯವಿಲ್ಲ. ನಿಮ್ಮ ಈ ಜಯಘೋಷಗಳನ್ನು ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿ ಕೇಳಲು ಬಯಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ರೋಡ್ ಶೋಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಕೈ ಹಿಡಿದೆತ್ತಿ ಗೆಲ್ಲಿಸಿಕೊಡುವಂತೆ ಮನವಿ ಮಾಡಿದ ಕಿಚ್ಚ, ಶಾಸಕರು ಮಾಡಿದ ಅಭಿವೃದ್ಧಿ ಕಾರ್ಯಗಳು, ಜನರ ಒಡನಾಟದ ಬಗ್ಗೆ ಹೇಳಿದರು.
ಒಟ್ಟಿನಲ್ಲಿ ಸುದೀಪ್ ಮೂಲಕ ಜಿಲ್ಲೆಯಲ್ಲಿ ವಾಲ್ಮೀಕಿ ಸಮುದಾಯ ಹಾಗೂ ಕಿಚ್ಚನ ಅಭಿಮಾನಿಗಳ ಮತಕ್ಕೆ ಗಾಳ ಹಾಕಿರುವ ಬಿಜೆಪಿ ಎಷ್ಟರ ಮಟ್ಟಿಗೆ ಸಫಲತೆ ಕಾಣುತ್ತದೆ ಎಂಬುದು ಫಲಿತಾಂಶದ ದಿನ ಗೊತ್ತಾಗಲಿದೆ.