4 ಕೋಟಿ 35 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಎಂ.ವೈಪಾ ಚಾಲನೆ

ಅಫಜಲಪುರ: ಆ.8:ಪಟ್ಟಣದ ಸೌಂದರೀಕರಣಕ್ಕೆ ಹಾಗೂ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲಿ ಪುರಸಭೆ ಕಾರ್ಯಾಲಯ, 2022-23ನೇ ಸಾಲಿನ ಅಮೃತ ನಗರೋತ್ಥಾನ ಹಂತ-4ರ ಯೋಜನೆ ಅಡಿಯಲ್ಲಿ 4ಕೋಟಿ 35 ಲಕ್ಷ ರೂ. ವೆಚ್ಚದಲ್ಲಿ ಮಂಜೂರಾದ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸಿಸಿ ರಸ್ತೆ, ಬಿ.ಟಿ.ರಸ್ತೆ, ಚರಂಡಿ ಮತ್ತು ಸೆಂಟರ್ ದೀಪ, ಹೈಮಾಸ್ಟ್ ದೀಪ ಹಾಗೂ ಡಿವೈಡರ್ ಕಾಮಗಾರಿಯ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಕಳೆದ 5 ವರ್ಷದ ಅವಧಿಯಲ್ಲಿ ಸಾಕಷ್ಟು ಅನುದಾನ ತಂದು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ.

ರಸ್ತೆ ಅಗಲೀಕರಣಕ್ಕೆ ಅಕ್ಕ ಪಕ್ಕದ ಅಂಗಡಿಗಳ ಮಾಲೀಕರು ಸಹಕರಿಸುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು. ಅಲ್ಲದೇ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ 84 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ.

ಒಳ ಚರಂಡಿ ನಿರ್ಮಾಣಕ್ಕೆ ಕಳೆದ ಮೂರು ವರ್ಷಗಳಿಂದ ಪಟ್ಟಣದ ನಿವಾಸಿಗಳ ಬೇಡಿಕೆ ಇರುವ ಹಿನ್ನೆಲೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಯೋಜನೆಗೆ 134 ಕೋಟಿ ರೂ. ತಗುಲುವ ಅಂದಾಜು ಇರುವ ಕುರಿತು ಗಮನಕ್ಕೆ ತಂದಿದ್ದೇನೆ. ಹೀಗಾಗಿ ಮೊದಲ ಹಂತದಲ್ಲಿ 30 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ತಹಸೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕರು ನಿರಂತರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಈಗಾಗಲೇ ಸರ್ಕಾರದಿಂದ ಅನುದಾನ ಕೂಡ ಬಿಡುಗಡೆಯಾಗಿದ್ದು ರಸ್ತೆಯ ಅಗಲೀಕರಣಕ್ಕೆ ಅಕ್ಕಪಕ್ಕದ ಅಂಗಡಿಗಳ ಮಾಲೀಕರು ಅಭಿವೃದ್ಧಿಯ ಕಾರ್ಯಕ್ಕೆ ಸಹಕರಿಸಬೇಕು. ಇಡೀ ತಾಲೂಕು ಆಡಳಿತ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣವಾಗಿ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್, ಮೋಶಿನ್ ಪಟೇಲ್, ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ಶರಣು ಕುಂಬಾರ, ಬಿಲ್ಲಮರಾಜ್ ಮ್ಯಾಳೇಶಿ, ಚಂದು ದೇಸಾಯಿ, ಶಿವು ಪದಕಿ, ರಾಜಶೇಖರ್ ಪಾಟೀಲ್, ಶಿವಪುತ್ರಪ್ಪ ಸಂಗೋಳಗಿ, ರವಿ ನಂದಶೆಟ್ಟಿ, ಶಿವಾನಂದ ಗಾಡಿ ಸಾಹುಕಾರ, ಎಸ್.ಎಸ್.ಪಾಟೀಲ್, ಚಂದ್ರಶೇಖರ್ ಕರಜಗಿ ಅನೇಕರು ಉಪಸ್ಥಿತರಿದ್ದರು.


ಶಿಷ್ಟಾಚಾರ ಉಲ್ಲಂಘನೆಗೆ ಸದಸ್ಯರ ಅಸಮಧಾನ

ಸಮಾರಂಭದ ವೇದಿಕೆ ಮೇಲೆ ಶಾಸಕರು, ಅಧಿಕಾರಿಗಳು, ಗುತ್ತಿಗೆದಾರರು ಆಸೀನರಾಗಿದ್ದಾಗ ಯಾವುದೇ ಚುನಾಯಿತ ಪ್ರತಿನಿಧಿಯಲ್ಲದ ಹಾಗೂ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಇಲ್ಲದ ವ್ಯಕ್ತಿ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ ಅವರು ಕುಳಿತುಕೊಂಡಿದ್ದರಿಂದ ವೇದಿಕೆಯ ಮುಂಭಾಗದಲ್ಲಿ ಉಪಸ್ಥಿತರಿದ್ದ ಪುರಸಭೆಯ ಸದಸ್ಯರು, ನಾವು ಜನಪ್ರತಿನಿಧಿಗಳಿದ್ದರೂ ಕೂಡ ವೇದಿಕೆ ಮೇಲೆ ಕುಳಿತುಕೊಂಡಿಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷನಾಗಿಕೊಂಡು ಸರ್ಕಾರಿ ಕಾರ್ಯಕ್ರಮದ ವೇದಿಕೆ ಮೇಲೆ ಕುಳಿತುಕೊಳ್ಳುವುದು ಸರಿಯಲ್ಲ.ಇದು ಪಕ್ಷದ ಕಾರ್ಯಕ್ರಮ ಅಲ್ಲ. ಸರ್ಕಾರಿ ಕಾರ್ಯಕ್ರಮ ಎಂದು ಕೆಲವು ಪುರಸಭೆಯ ಸದಸ್ಯರು ಗುಸುಗುಸು ಮಾತನಾಡಿ ಆಯೋಜಕರ ವಿರುದ್ಧ ಅಸಮಾಧಾನ ಹೊರಹಾಕಿದರು.