
ಬೀದರ:ಮಾ.26:ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಮಾರ್ಚ್ 25ರಂದು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ವಲ್ಲೇಪೂರ, ಬೇಲೂರ, ನಿಡೋದಾ, ಠಾಣಾಕುಶನೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸುಮಾರು 4 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬೇಲೂರ(ಎನ್) ಗ್ರಾಮದಲ್ಲಿ ಬೇಲೂರಿನಿಂದ ಶೆಂಬೆಳ್ಳಿವರೆಗೆ 3 ಕೋಟಿಯ ರಸ್ತೆ ಕಾಮಗಾರಿ, ವಲ್ಲೇಪೂರನಲ್ಲಿ 25 ಲಕ್ಷದ ರಸ್ತೆ, ನಿಡೋದಾ ಗ್ರಾಮದಲ್ಲಿ ನಿಡೋದಾದಿಂದ ಠಾಣಾಕುಶನೂರ ವರೆಗಿನ 50 ಲಕ್ಷದ ರಸ್ತೆ ಕಾಮಗಾರಿ ಹಾಗೂ ಠಾಣಾಕುಶನೂರನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದಿಂದ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಾಂಸ್ಕೃತಿಕ ಭವನ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವರು, ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ತಾವು ಶಾಸಕರಾದ ನಂತರ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿ ಕೆಲಸಗಳಾಗಿವೆ. ಎಲ್ಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಮ ಸಂಚಾರ ಕೈಗೊಂಡು ಜನರ ಸಮಸ್ಯೆಗಳನ್ನು ಆಲಿಸಿ ಅವರ ಬೇಡಿಕೆಗೆ ಅನುಗುಣ ಆದ್ಯತೆಯ ಮೇಲೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಒತ್ತು ಕೊಡಲಾಗಿದೆ. ಅಭಿವೃದ್ಧಿಯ ಜೊತೆಗೆ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಮಾಡಲಾಗಿದೆ ಎಂದರು.
ಠಾಣಾಕುಶನೂರ ವಿರಕ್ತ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿ ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ರಾಮಶೆಟ್ಡಿ ಪನ್ನಾಳೆ, ಸುರ್ಯಕಾಂತ ಅಲ್ಮಾಜೆ, ರಾಜಶೇಖರ ಜೀರ್ಗೆ, ಗಿರೀಶ ಒಡೆಯರ್, ಧನರಾಜ ಜೀರ್ಗೆ, ನಾಗಶೆಟ್ಟೆ ಶಂಬೆಳ್ಳೆ, ಶಾಂತಕುಮಾರ ಬೋಚ್ರೆ, ಪ್ರವೀಣ್ ಕಾರಭಾರಿ, ನಿತೀನ್ ಪಟೇಲ್ ಹಾಗೂ ಇತರರು ಉಪಸ್ಥಿತರಿದ್ದರು.
ಬೆಳೆ ಹಾನಿ ಪರಿಶೀಲನೆ: ಗ್ರಾಮ ಸಂಚಾರದ ಸಂದರ್ಭದಲ್ಲಿ ಸಚಿವರು ನಿಡೋದಾ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಹಾನಿಯಾದ ರೈತರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು.
ಕೆಲವು ದಿನಗಳ ಹಿಂದೆ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಬೆಳೆದು ನಿಂತ ಗೋಧಿ ಸಂಪೂರ್ಣ ಉದುರಿ ಹಾನಿಯಾಗಿದೆ. ಸುತ್ತಲಿನ ಹೊಲಗಳಲ್ಲಿ ಬೆಳೆದ ಜೋಳ, ಕುಸುಬೆ, ಟೊಮ್ಯಾಟೊ ಹಾಗೂ ಮತ್ತಿತರೆ ಬೆಳೆಗಳು ನೆಲಕ್ಕುರುಳಿವೆ ಎಂದು ರೈತರು ಸಚಿವರ ಗಮನಕ್ಕೆ ತಂದರು. ಈ ವೇಳೆ ಸಚಿವರು ಮಾತನಾಡಿ, ಅಕಾಲಿಕ ಮಳೆಯಿಂದ ಕ್ಷೇತ್ರದಲ್ಲಿ ಉಂಟಾಗಿರುವ ಬೆಳೆ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲಾಗುತ್ತದೆ. ಸರ್ಕಾರ ನಿಮ್ಮೊಂದಿಗಿದೆ. ನಾನು ನಿಮ್ಮ ಜೊತೆಗಿದ್ದೇನೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ನೊಂದವರ ಮನೆಗೆ ಭೇಟಿ: ಗ್ರಾಮ ಸಂಚಾರದ ವೇಳೆ ಸಚಿವರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೊಂದವರ ಮನೆಗಳಿಗೆ ಭೇಟಿ ನೀಡಿ ವೈಯಕ್ತಿಕ ಸಹಾಯ ಮಾಡಿದರು.
ಬೇಲೂರ(ಎನ್) ಗ್ರಾಮದಲ್ಲಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಜಹೀರಾಬೀ ರಾಜಾಸಾಬ್, ನಿಡೋದಾ ಗ್ರಾಮದ ಮನ್ಮಥ ನಿಟ್ಟೂರೆ, ತೀವ್ರ ಅನಾರೋಗ್ಯಕ್ಕೆ ಒಳಗಾದ ಅಶೋಕ ಹಜನಾಳೆ, ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸುನೀಲ ಟೋಕ್ರೆ ಹಾಗೂ ಅಶೋಕ ತಡಕಲೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರಲ್ಲದೇ ವೈಯಕ್ತಿಕ ನೆರವು ನೀಡಿದರು.