4ನೇ ದಿನಕ್ಕೆ ಕಾಲಿಟ್ಟ ಮದ್ಯವರ್ಜನ ಶಿಬಿರ:ಮನ ಪರಿವರ್ತನೆಯತ್ತ ಶಿಬಿರಾರ್ಥಿಗಳು

ಅಫಜಲಪುರ:ಡಿ.27: ಪಟ್ಟಣದ ದುಧನಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಕಲ್ಯಾಣ ಮಂಟಪದಲ್ಲಿ ಡಿ.24 ರಿಂದ ಡಿ.31 ರವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಿದ 1777 ನೇ ಮದ್ಯವರ್ಜನ ಶಿಬಿರವು ನಾಲ್ಕನೇ ದಿನಕ್ಕೆ ಪಾದಾರ್ಪಣೆ ಮಾಡಿದ್ದು ಶಿಬಿರಾರ್ಥಿಗಳು ಕುಡಿಯುವುದನ್ನು ಬಿಟ್ಟು ಸುಂದರವಾದ ಬದುಕು ನಡೆಸುವ ಇಂಗಿತ ವ್ಯಕ್ತಪಡಿಸುತ್ತಿರುವುದಕ್ಕೆ ಕುಟುಂಬಸ್ಥರು ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಮದ್ಯವರ್ಜನ ಶಿಬಿರದ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ನಾಗೇಂದ್ರ ಅವರು ಪ್ರತಿಕ್ರಿಯಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ
ಕುಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಅವರನ್ನು ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಶಿಬಿರವು ರಾಜ್ಯದಾದ್ಯಂತ 1776 ಮದ್ಯವರ್ಜನ ಶಿಬಿರಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿವೆ. ಇದೀಗ ಅಫಜಲಪುರ ಹಾಗೂ ಸುತ್ತಮುತ್ತಲ ತಾಲೂಕು ಮತ್ತು ಗ್ರಾಮಗಳಿಂದ ಆಗಮಿಸಿದ ಸುಮಾರು 120ಕ್ಕೂ ಅಧಿಕ ಶಿಬಿರಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಶಿಬಿರಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು ಅವರು ಕುಡಿತವನ್ನು ಬಿಟ್ಟು ನವಜೀವನಕ್ಕೆ ಕಾಲಿಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಈ ಶಿಬಿರದಲ್ಲಿ ಯೋಗ, ಧ್ಯಾನ, ಭಜನೆ, ಗಣ್ಯರಿಂದ ಮಾಹಿತಿ ದರ್ಶನ, ಸ್ವಾಮೀಜಿಯವರಿಂದ ಆಶೀರ್ವಚನ, ಹಿಂದಿನ ನವಜೀವನ ಸಮಿತಿಗಳಿಂದ ಅನಿಸಿಕೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ಮನ ಪರಿವರ್ತನೆ ಮಾಡಿಸುವ ಕೆಲಸ ನಡೆಯುತ್ತಿರುವುದಾಗಿ ತಿಳಿಸಿದರು.

ಶಿಬಿರದಲ್ಲಿ ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ, ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ, ಆರೋಗ್ಯ ಸಹಾಯಕಿ ರಂಜಿತಾ, ಮೇಲ್ವಿಚಾರಕರಾದ ರೂಪಾ ಕಬ್ಬೂರ, ರೂಪಾ ಹೆಬ್ಬಾಳಟ್ಟಿ, ಪಾರ್ವತಿ, ಕವಿತಾ ಹಾಗೂ ಸಿಬ್ಬಂದಿ ವರ್ಗ ಇದ್ದರು.