4ಡಿ ಇಕೋ ಯಂತ್ರ, ಹೊಸ ಕ್ಯಾತ್‍ಲ್ಯಾಬ್ ಲೋಕಾರ್ಪಣೆ


ಹುಬ್ಬಳ್ಳಿ, ಆ.30: ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ 1 ಕೋಟಿ ರೂ.ಅನುದಾನದಲ್ಲಿ 4 ಡಿ ಇಕೋ ಯಂತ್ರ ಹಾಗೂ ರಾಜ್ಯ ಸರ್ಕಾರದ ಕಿಮ್ಸ್‍ನ ಸುಮಾರು 5.5 ಕೋಟಿ ರೂ. ಅನುದಾನದಲ್ಲಿ ಸ್ಥಾಪಿಸಲಾಗಿರುವ ಹೃದಯದ ತೂರುನಳಿಕೆ ಅಳವಡಿಕೆ (ಕ್ಯಾತ್‍ಲ್ಯಾಬ್) ಘಟಕವನ್ನು ಇಂದು ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ ಲೋಕಾರ್ಪಣೆ ಮಾಡಿದರು.
ನಂತರ ಅವರು ಮಾತನಾಡಿ, ಉತ್ತರ ಕರ್ನಾಟಕದ ಸಂಜೀವಿನಿ ಎಂದು ಹೆಸರಾಗಿರುವ ಕಿಮ್ಸ್‍ನಲ್ಲಿ ಹೊಸ 4ಡಿ ಇಕೋ ಯಂತ್ರ ಹಾಗೂ ಕ್ಯಾತ್‍ಲ್ಯಾಬ್ ಘಟಕಗಳು ಸ್ಥಾಪನೆಯಾಗಿರುವುದು.ಅಗತ್ಯವಿರುವ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ನೆರವಾಗಲಿದೆ.ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರವನ್ನೂ ಕೂಡ ಸ್ಥಾಪಿಸಲಾಗುತ್ತಿದೆ.ನವನಗರದ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ಜನಸೇವೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಿದೆ ಎಂದರು.
ಕೈಮಗ್ಗ,ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ,ಮಾಜಿಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ್,ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ,ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ ಚವ್ಹಾಣ,ಪ್ರಾಚಾರ್ಯ ಡಾ.ಈಶ್ವರ ಹೊಸಮನಿ,ಡಾ.ರಾಜಶೇಖರ ದ್ಯಾಬೇರಿ,ಡಾ.ಲಕ್ಷ್ಮೀಕಾಂತ ಲೋಕರೆ ಮತ್ತಿತರರು ಇದ್ದರು.