38ನೇ ವಾರ್ಡ್ ನಲ್ಲಿ ಕೋವಿಡ್-19 ಲಸಿಕೆ ಅಭಿಯಾನ

ದಾವಣಗೆರೆ,ಏ.17: ಪಾಲಿಕೆ ವ್ಯಾಪ್ತಿಯ 38ನೇ ವಾರ್ಡ್ನ ಐಎಂಎ ಹಾಲ್‌ನಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕೋವಿಡ್ ಲಸಿಕಾ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಬೆಳಿಗ್ಗೆ 10 ಗಂಟೆಯಿಂದ ಆರಂಭವಾದ ಕೋವಿಡ್ ಲಸಿಕೆ ಅಭಿಯಾನಕ್ಕೆ ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್ ಚಾಲನೆ ನೀಡಿದರು.ಈ ಅಭಿಯಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯ ವರೆಗೂ 350ಕ್ಕೂ ಹೆಚ್ಚು ನಾಗರಿಕರು ಲಸಿಕೆ ಪಡೆದಿದ್ದು, ಸಂಜೆ 4 ಗಂಟೆಯ ವರೆಗೂ ಲಸಿಕೀಕರಣ ನಡೆಸಲಾಗುವುದು ಎಂದು ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ತಿಳಿಸಿದರು.ಲಸಿಕೆ ಪಡೆದಿರುವ ನಾಗರೀಕರು ಎರಡನೇ ಡೋಸ್ ಲಸಿಕೀಕರಣವನ್ನು ಇಲ್ಲಿಯೇ ನಡೆಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದ ಅವರು. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಿ ಕೈ ಶುಚಿ ಗೊಳಿಸಿಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಆಟೋ, ಟ್ರ್ಯಾಕ್ಟರ್ ಗಳಿಗೆ ಫ್ಲೆಕ್ಸ್ ಅಳವಡಿಸಿ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ಕೆ.ಚಮನ್ ಸಾಬ್, ಹಿರಿಯ ನಾಗರಿಕ ಗುರುಮೂರ್ತಿ ಮತ್ತಿತರರು ಹಾಜರಿದ್ದರು.