371(ಜೆ) ಸಂಪುಟ ಉಪ ಸಮಿತಿ ನೂತನ ಅಧ್ಯಕ್ಷರ ಮುಂದೆ ಹತ್ತು ಸವಾಲುಗಳು: ದಸ್ತಿ

ಕಲಬುರಗಿ,ಜು.25:371(ಜೆ) ಸಂಪುಟ ಉಪ ಸಮಿತಿಯ ನೂತನ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರ ಮುಂದೆ ಹತ್ತು ಸವಾಲುಗಳು ಇವೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಜಾರಿಯಾಗಿರುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿಯ ವಿಶೇಷ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ 371(ಜೆ) ಸಂಪುಟ ಉಪ ಸಮಿತಿ ಅತಿ ಮಹತ್ವದ ಸಮಿತಿಯಾಗಿದೆ. ಕಲ್ಯಾಣದ ಪಾಲಿನ ನೇಮಕಾತಿಗಳು, ಮುಂಬಡ್ತಿಗಳು, ಶೈಕ್ಷಣಿಕ ಪ್ರವೇಶಗಳು ಸೇರಿದಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿಷಯಗಳ ಕುರಿತು ಪರಿಶೀಲನೆ, ನಿಯಮಗಳ ಪರಿಷ್ಕರಣೆ, ಹೊಸ ನಿಯಮಗಳ ರಚನೆ ಮಾಡುವ ಬಲಿಷ್ಠ ಸಮಿತಿಯಾಗಿರುವ ಸಂಪುಟ ಉಪ ಸಮಿತಿಗೆ ಪ್ರಿಯಾಂಕ್ ಖರ್ಗೆಯವರು ಅಧ್ಯಕ್ಷರಾಗಿರುವುದು ಸಂತಸ ತಂದಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ನೇಮಕಾತಿ ಮತು ಮುಂಬಡ್ತಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೇಮಕಾತಿ ಮಾನದಂಡದ ಮಾದರಿಯ ಸೂತ್ರ ಅನುಸರಿಸಿ ನಮ್ಮ ಹಕ್ಕಿನ ಹುದ್ದೆಗಳು ಮತ್ತು ಮುಂಬಡ್ತಿಗಳು ಪಡೆಯು ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ನಿಯಮಗಳನ್ನು ಪರಿಶೀಲಿಸಿ ಪರಿಷ್ಕರಣೆ ಮಾಡುವುದು ಅವಶ್ಯಕತೆ ಇದ್ದರೆ ಹೊಸ ನಿಯಮಗಳನ್ನು ರೂಪಿಸಬೇಕು. ರಾಜ್ಯದಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳಲ್ಲಿ ನಮ್ಮ ಪಾಲಿನ ಹುದ್ದೆಗಳ ಭರ್ತಿಗೆ ಕಾಲಮಿತಿಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಎಲ್ಲ ಇಲಾಖೆಗಳ ನೇಮಕಾತಿಗಳು ಮುಂಬಡ್ತಿಗಳು ಕಡ್ಡಾಯವಾಗಿ ಉಪ ಸಮಿತಿಯ ಪರಿಶೀಲನೆಗೆ ಒಳಪಟ್ಟು ಸಮಿತಿಯ ಅನುಮೋದನೆ ನಂತರವೇ ಮುಂದಿನ ಕ್ರಮ ಜರುಗಿಸುವಂತೆ, 371(ಜೆ) ನಿಯಮಾವಳಿಯಂತೆ ಕಲ್ಯಾಣದ ಅಭ್ಯರ್ಥಿಗಳಿಗೆ ನೇಮಕಾತಿಗಳಲ್ಲಿ ಕೃಪಾಂಕ ನೀಡುವಂತೆ ಕ್ರಮ ಕೈಗೊಳ್ಳುವಂತೆ, ಅದರಂತೆ ನಮ್ಮ ಅಭ್ಯರ್ಥಿಗಳಿಗೆ ನೇಮಕತಿಗಳಲ್ಲಿ ವಯಸ್ಸಿನಲ್ಲಿ ಸಡಿಲಿಕೆ ನೀಡುವಂತೆ, ಕಲ್ಯಾಣದ ಕಾಲಮಿತಿಯ ರಚನಾತ್ಮಕ ಪ್ರಗತಿಗೆ ಮತ್ತು ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಲು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ನಂಜುಂಡಪ್ಪ ವರದಿಯನ್ನು ಆಧಾರವಾಗಿಟ್ಟುಕೊಂಡು ಕಲ್ಯಾಣದ ಹೊಸ ವರದಿ ಸಿದ್ಧಪಡಿಸಲು ಕ್ರಮ ಕೈಗೊಳ್ಳುವಂತೆ, 371(ಜೆ) ಕಲಂ ನಿಯಮದಂತೆ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಕಚೇರಿಗಳು ವಿಭಾಗೀಯ ಕೇಂದ್ರ ಕಲಬುರ್ಗಿಗೆ ಸ್ಥಳಾಂತರಿಸುವಂತೆ, ಸಂಪುಟ ಉಪ ಸಮಿತಿಗೆ ಆಗಾಗ ಸಲಹೆಗಳು ಪಡೆಯಲು ಕಲ್ಯಾಣದ ಸ್ಥಳೀಯ ಪರಿಣಿತರ ಒಂದು ಸಲಹಾ ಸಮಿತಿ ರಚಿಸುವಂತೆ ಒತ್ತಾಯಿಸಿದ ಅವರು, ಮೊದಲನೇ ಹಂತದ ಈ ಪ್ರಮುಖ ವಿಷಯಗಳಿಗೆ ಸಂಪುಟ ಉಪ ಸಮಿತಿ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.