371(ಜೆ) ವಿರೋಧಿಸುತ್ತಿರುವ ಬೆಂಗಳೂರಿನ ಹಸಿರು ಪ್ರತಿಷ್ಠಾನ ಸಂಘಟನೆ ನಿಷೇಧಕ್ಕೆ ಮುತ್ತಣ್ಣ ನಡಗೇರಿ ಒತ್ತಾಯ

ಕಲಬುರಗಿ:ಮೇ.30:ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಮತ್ತು 371 (ಜೆ) ಮೀಸಲಾತಿಗೆ ವಿರೋಧ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಬೆಂಗಳೂರಿನ ಹಸಿರು ಪ್ರತಿಷ್ಠಾನ ಸಂಘಟನೆಯನ್ನು ಈ ಕೂಡಲೇ ನಿಷೇಧ ಮಾಡಬೇಕೆಂದು ಸಮಸ್ತ ಕಲ್ಯಾಣನಾಡು ವಿಕಾಸ್ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸ್ವತಂತ್ರ ಸಮಯದಲ್ಲಿ ಮತ್ತು ಸ್ವತಂತ್ರ ನಂತರ ದಕ್ಷಿಣ ಕರ್ನಾಟಕವು ಎಲ್ಲ ರೀತಿಯಿಂದ ಅಭಿವೃದ್ದಿ ಹೊಂದಿದ ಭಾಗವಾಗಿತ್ತು. ಆದರೆ, ಅದೇ ಸಮಯದಲ್ಲಿ ನಮ್ಮ ಹೈದ್ರಾಬಾದ್ ಕರ್ನಾಟಕ ವಿಭಾಗವು ಹೈದ್ರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟು ಎಲ್ಲ ರಂಗಗಳಲ್ಲಿ ಹಿಂದುಳಿದಿತ್ತು. ಸ್ವತಂತ್ರ ಬಂದು 75 ವರ್ಷ ಕಳೆದರೂ ದೇಶದಲ್ಲಿ ಎಲ್ಲ ರೀತಿಯಲ್ಲಿ ಹಿಂದುಳಿದ ವಿಭಾಗದ ಅಭಿವೃದ್ದಿಗಾಗಿ ನಮ್ಮ ಭಾಗದ ನಾಯಕರ ಇಚ್ಛಾಶಕ್ತಿಯಿಂದ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಂಬಲದಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಕಲಂ ಅನ್ವಯ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸಿಕ್ಕು ಕೇವಲ 10 ವರ್ಷ ಆಗಿದೆ. 371(ಜೆ)ಯ ಫಲವನ್ನು ನಾವು ಈಗಷ್ಟೆ ಬಳಸಿಕೊಳ್ಳುತ್ತಿದ್ದೇವೆ, ಆದರೆ ಅದನ್ನು ಸಹಿಸಿಕೊಳ್ಳದ ಕೆಲವು ಕಲ್ಯಾಣ ಕರ್ನಾಟಕ ವಿರೋಧಿ ಮನಸ್ಸುಗಳು ಮತ್ತು ಹಸಿರು ಪ್ರತಿಷ್ಠಾನ ಎಂಬ ಸಂಘಟನೆಯವರು ಸೇರಿ ನಮಗೆ ಅಭಿವೃದ್ಧಿಗಾಗಿ ಸಿಕ್ಕಿರುವ 371 (ಜೆ) ಎಂಬ ಫಲವನ್ನು ಕಸಿದುಕೊಳ್ಳಲು ಹುನ್ನಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಎಲ್ಲ ರೀತಿಯ ಅಭಿವೃದ್ದಿಯಲ್ಲಿ ಮುಂದುವರೆದಿರುವ ದಕ್ಷಿಣ ಕರ್ನಾಟಕದವರು 75 ವರ್ಷಗಳಿಂದ ನಮ್ಮ ಎಲ್ಲ ರೀತಿಯ ಸೌಲಭ್ಯಗಳಿಗೆ ವಿರೋಧವನ್ನು ಮಾಡುತ್ತಾ ಬಂದಿದ್ದು, ಅದೇ ರೀತಿ ಈಗಲೂ ಕೂಡ 371(ಜೆ) ಕಲಂ ವಿರೋಧ ಮಾಡುತ್ತಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುವುದರ ಬಗ್ಗೆ ಆ ಭಾಗದ ವಿಚಾರವಂತರೆಲ್ಲರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನಮ್ಮ ಭಾಗ ಹಿಂದುಳಿದಿದೆ ಎಂದು ಹೇಳಲು ಆ ಭಾಗದ ಎಲ್ಲರೂ ನಮ್ಮ ಭಾಗಕ್ಕೆ ಬಂದು ನಮ್ಮ ಭಾಗದ ಸಮಸ್ಯೆಗಳನ್ನು ಅರಿಯುವ ಕೆಲಸವನ್ನು ವಾಸ್ತವಿಕವಾಗಿ ಮಾಡಬೇಕು. ನಮ್ಮ ವಿಭಾಗವು ಕರ್ನಾಟಕ ರಾಜ್ಯದಲ್ಲಿ ಬರುತ್ತದೆ ಎಂಬುವುದನ್ನು ಮೊದಲು ಆ ಭಾಗದವರು ತಿಳಿಯಬೇಕು. ಅಭಿವೃದ್ದಿ ಮತ್ತು ಎಲ್ಲ ರೀತಿಯಲ್ಲಿ ಹಿಂದುಳಿದ ನಾವುಗಳು ಪ್ರತ್ಯೇಕ ರಾಜ್ಯ ಕೇಳಿದರೆ, ಅದು ತಪ್ಪು ಹಾಗೂ ರಾಜ್ಯ ವಿರೋಧಿ ಆಗುತ್ತದೆ. ಅದೇ ಹಸಿರು ಪ್ರತಿಷ್ಠಾನದವರು ನಮ್ಮ ಭಾಗದ ಅಭಿವೃದ್ದಿಗಾಗಿ ಇರುವ 371(ಜೆ) ಮೀಸಲಾತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದರೆ ಅದು ದೇಶಪ್ರೇಮವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
371(ಜೆ) ಉಪ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಬೇಕು. ನಮ್ಮ ಭಾಗದ ಸರ್ವೋತೊಮುಖ ಅಭಿವೃದ್ಧಿಗೆ ವಿರೋಧ ವ್ಯಕ್ತ ಮಾಡುತ್ತಿರುವ ಹಸಿರು ಪ್ರತಿಷ್ಠಾನದ ಹುನ್ನಾರವನ್ನು ನಮ್ಮ ಭಾಗದ ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು, ವಿಚಾರವಂತರು, ಚಿಂತಕರು, ಹೋರಾಟಗಾರರು, ವಿದ್ಯಾರ್ಥಿಗಳು ಹಾಗೂ ಎಲ್ಲ ಜನರು ಸೇರಿ ಈ ಸಂವಿಧಾನ ವಿರೋಧಿ ಮನಸ್ಸುಗಳನ್ನು ಖಂಡಿಸುವ ಮೂಲಕ ನಮ್ಮ ಹೋರಾಟಗಳಿಗೆ ಬೆಂಬಲ ನೀಡಬೇಕು, ನಮಗೆ ಹೋರಾಟದ ಮೂಲಕ ಸಿಕ್ಕಿರುವ 371 (ಜೆ) ಸಂವಿಧಾನದ ಮೀಸಲಾತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತೆ ಹೋರಾಟ ಮಾಡುವ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಜೂನ್ 1ರಂದು ಹಸಿರು ಪ್ರತಿಷ್ಠಾನ ಮತ್ತು ವಿಚಾರವಂತರು ಎಂದು ಹೇಳಿಕೊಂಡು ಹಲವರು ಸೇರಿ ಸ್ವತಂತ್ರ ಉದ್ಯಾನವನದಲ್ಲಿ 371(ಜೆ) ಕಲಂ ನಿಂದ ಇತರೆ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಕಲ್ಯಾಣ ಕರ್ನಾಟಕ ವಿರೋಧಿ, ರಾಜ್ಯದ ವಿರೋಧಿ, ಸಂವಿಧಾನದ ವಿರೋಧಿ, ಅಭಿವೃದ್ದಿ ವಿರೋಧಿ ಮತ್ತು ಪ್ರಾದೇಶಿಕ ಅಸಮೋತಲನದ ಪರವಾಗಿರುವುದರಿಂದ ರಾಜ್ಯ ಸರ್ಕಾರವು ಈ ಪ್ರತಿಭಟನೆಗೆ ಅವಕಾಶವನ್ನು ಮಾಡಿಕೊಡಬಾರದು ಎಂದು ಅವರು ಒತ್ತಾಯಿಸಿದರು.
ಒಂದು ವೇಳೆ ರಾಜ್ಯ ಸರ್ಕಾರವು ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟರೆ, ಸಮಸ್ತ ಕಲ್ಯಾಣ ಕರ್ನಾಟಕ ಭಾಗ ಮತ್ತು ಜನತೆಯ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ನಮ್ಮ ಭಾಗಕ್ಕೆ ಅಭಿವೃದ್ಧಿ ಹೊಂದಲು ನೀಡಿರುವ ಮೀಸಲಾತಿಯನ್ನು ಕಿತ್ತುಕೊಳ್ಳುವ ಯಾವುದೇ ರೀತಿಯ ಹೋರಾಟ, ಪ್ರತಿಭಟನೆ ಮತ್ತು ಸಂಘಟನೆಗಳಿಗೆ ರಾಜ್ಯ ಸರ್ಕಾರವು ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಾಬು ಮದನಕರ್, ಜೈಭೀಮ್ ಆಲಗೂಡ್, ಮೋಹನ್ ಸಾಗರ್, ಪ್ರವೀಣ್ ಖೇಮನ್, ನಾಗು ಡೊಂಗರಗಾಂವ್, ಅರುಣ್ ಇನಾಮದಾರ್ ಮುಂತಾದವರು ಉಪಸ್ಥಿತರಿದ್ದರು.