371(ಜೆ): ನೇಮಕಾತಿ-ಬಡ್ತಿ ಗೊಂದಲ ಸರಿಪಡಿಸಲು ನಮೋಶಿ ಆಗ್ರಹ

ಕಲಬುರಗಿ: ಜ.13:ಸರಕಾರಿ ನೇಮಕಾತಿ ಹಾಗೂ ವಿವಿಧಿ ಇಲಾಖೆಗಳಲ್ಲಿ ನೀಡಲಾಗುತ್ತಿರುವ ಬಡ್ತಿ ಸಂದರ್ಭದಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅತಿ ಹೆಚ್ಚು ಅಂಕಗಳನ್ನು ಪಡೆದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ನಾನ್-ಎಚ್‍ಕೆ (ಹೈದರಾಬಾದ್-ಕರ್ನಾಟಕೇತರ) ವೃಂದದಲ್ಲಿ ಆಯ್ಕೆಯಾಗುವುದು ಅವರ ಮೂಲಭೂತ ಹಕ್ಕಾಗಿರುತ್ತದೆ. ಆದರೆ, ಈ ನಿಯಮವನ್ನು ಅಲ್ಲಗಳೆಯುವ ಮೂಲಕ ಸಂವಿಧಾನದ ಪರಿಚ್ಛೇದ 14 ಹಾಗೂ 371(ಜೆ) ನಿಯಮಾವಳಿಗಳನ್ನು ಉಲ್ಲಂಘಿಸಲಾಗುತ್ತಿದೆ. ಹಾಗಾಗಿ, ಯಾವುದೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವಾಗ ಮೊದಲು ನಾನ್-ಎಚ್‍ಕೆ ಮೂಲ ವೃಂದ ಪ್ರಕಟಿಸಿದ ನಂತರ ಎಚ್.ಕೆ. ವೃಂದ ಪ್ರಕಟಿಸುವಂತೆ ನಿಯಮ ರೂಪಿಸಬೇಕೆಂದು ಸಲಹೆ ನೀಡಿದರು.

ಪ್ರಸಕ್ತ 371(ಜೆ) ಅಡಿ ಸಮತಲದ ಬದಲು ಲಂಬೀಕೃತ ಮೀಸಲಾತಿ ನೀಡಲಾಗುತ್ತಿದೆ. ಇದರ ಬದಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡುತ್ತಿರುವ ಮಾದರಿಯಲ್ಲಿ 371(ಜೆ) ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಅರ್ಜಿ ಸಲ್ಲಿಸುವ ಸ್ಥಳ ಅಥವಾ ನಿಯುಕ್ತಿ ಸಂದರ್ಭದಲ್ಲಿ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ ಆದ್ಯತೆ ಬಗ್ಗೆ ಅಸಂವಿಧಾನಿಕವಾಗಿ ಪ್ರಶ್ನೆಗಳನ್ನು ಕೇಳುವ ಪರಿಪಾಠ ಕೈಬಿಡಬೇಕು. ಮಿಕ್ಕುಳಿದ ವೃಂದದ ಅಡಿಯಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಸೇವಾ ಅವಧಿಯಲ್ಲಿ ಸ್ಥಳೀಯ ವೃಂದದ ಯಾವುದೇ ಸೌಲಭ್ಯ ಸಿಗುವುದಿಲ್ಲ ಎಂಬ ಅಸಂವಿಧಾನಿಕ ನಿಯಮ ತೆಗೆದು ಹಾಕಬೇಕು. ಎಸ್ಸಿ/ಎಸ್ಟಿ ಮಾದರಿಯಲ್ಲಿ ಜನರಲ್ ಮೆರಿಟ್‍ನಲ್ಲಿಯೂ ಅಭ್ಯರ್ಥಿಗಳಿಗೆ 371(ಜೆ) ಅಡಿ ಸೇವಾ ಸೌಲಭ್ಯಗಳನ್ನು ಮುಂದುವರೆಸಬೇಕೆಂದು ಅವರು ಸಲಹೆ ನೀಡಿದರು.

ಮೆರಿಟ್ ಅನುಗುಣವಾಗಿ ಆಯ್ಕೆಪಟ್ಟಿ ಸಿದ್ಧಪಡಿಸುವಾಗ ಮೊದಲಿಗೆ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿ ಸಿದ್ದಪಡಿಸಬೇಕು. ನಂತರ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಎದುರಾಗಿ ಅರ್ಹ ಸ್ಥಳೀಯ ಅಭ್ಯರ್ಥಿಗಳ ಆಯ್ಕೆಪಟ್ಟಿ ಸಿದ್ದಪಡಿಸಬೇಕೆಂದು ಅವರು ಒತ್ತಿ ಹೇಳಿದರು.

ಪ್ರವೀಣ ಹರಿದಾಸ ಮತ್ತು ಅಣವೀರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.