371(ಜೆ) ಜಾರಿಯಲ್ಲಿ ಮಲತಾಯಿ ಧೋರಣೆ ತಡೆಯದಿದ್ದರೆ ಹೋರಾಟ: ಜಮಾದಾರ್

ಕಲಬುರಗಿ,ಮೇ.28:ಕಲ್ಯಾಣ ಕರ್ನಾಟಕಕ್ಕೆ ಈಗಾಗಲೇ ಜಾರಿಯಾಗಿರುವ 371(ಜೆ) ಕಲಂನಡಿ ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಲ್ಲಿ ಶೇಕಡಾ 8ರಷ್ಟು ಔದ್ಯೋಗಿಕ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಬೇಕು. ಇಲ್ಲದೇ ಹೋದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಅಹಿಂದ್ ಚಿಂತಕರ ವೇದಿಕೆಯ ರಾಜ್ಯಾಧ್ಯಕ್ಷ ಸೈಬಣ್ಣ ಜಮಾದಾರ್ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2013ರ ಜನವರಿ 1ರಂದು ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕಲಂ ಜಾರಿಯಾಗಿದ್ದು, ಹತ್ತು ವರ್ಷಗಳಿಂದಲೂ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಅಲ್ಲದೇ ಔದ್ಯೋಗಿಕ ಹಾಗೂ ಪದೋನ್ನತಿಯಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ದೂರಿದರು.
ಕಲ್ಯಾಣ ಕರ್ನಾಟಕಕ್ಕೆ 371(ಜೆ) ಮೀಸಲಾತಿಯನ್ನು ಇಲ್ಲಿಯವರೆಗೆ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರಗಳು ಸಮರ್ಪಕವಾಗಿ ಜಾರಿಗೆ ತರುತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಮೀಸಲಾತಿ ಜಾರಿಗೆ ತರದ ರಾಜ್ಯ ಸರ್ಕಾರವು ಅದೇ ಕಲ್ಯಾಣ ಕರ್ನಾಟಕೇತರ ಅಭ್ಯರ್ಥಿಗಳಿಗೆ ಶೇಕಡಾ 20ರಷ್ಟು ಮೀಸಲಾತಿಯನ್ನು 371(ಜೆ)ಯಡಿ ಕೊಟ್ಟು, ಶೇಕಡಾ 8ರಷ್ಟು ಮೀಸಲಾತಿಯನ್ನು ಕಲ್ಯಾಣ ಕರ್ನಾಟಕದವರಿಗೆ ಕಲ್ಯಾಣ ಕರ್ನಾಟಕೇತರ 24 ಜಿಲ್ಲೆಗಳಲ್ಲಿ ಕೊಡುತ್ತಿಲ್ಲ ಎಂದು ಅವರು ಆರೋಪಿಸಿದರು.
ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 219 ನೇಮಕಾತಿಯನ್ನು ಕೈಗೊಳ್ಳಲಾಗಿದೆ. ಆದಾಗ್ಯೂ, ಕಲ್ಯಾಣ ಕರ್ನಾಟಕದವರಿಗೆ ನಯಾಪೈಸೆ ಮೀಸಲಾತಿ ಕೊಟ್ಟಿಲ್ಲ. ಸರಾಸರಿ 18 ಹುದ್ದೆಗಳು ಕಲ್ಯಾಣ ಕರ್ನಾಟಕದವರಿಗೆ ಕೊಡಬೇಕು. ಹೊಸ ಕಾಂಗ್ರೆಸ್ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು. ತುಮಕೂರು ಜಿಲ್ಲಾ ಸಹಕಾರಿ ಸಂಘದಲ್ಲಿನ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದು, 371(ಜೆ)ಯಡಿ ನೇಮಕಾತಿಯನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಅದಕ್ಕಾಗಿಯೇ 371(ಜೆ) ಕಲಂ ಜಾರಿಗೆ ತರಲಾಗಿದೆ. ಆದಾಗ್ಯೂ, ಉದ್ಯೋಗ ಮತ್ತು ಬಡ್ತಿಯಲ್ಲಿ ಈ ಮೀಸಲಾತಿ ಸೌಲಭ್ಯವನ್ನು ಇಲ್ಲಿಯವರೆಗೆ ಜಾರಿಯಾಗಿಲ್ಲ. ಕೂಡಲೇ ಇರುವ ಲೋಪದೋಷಗಳನ್ನು ನಿವಾರಿಸಿ ಸಮರ್ಪಕವಾಗಿ ವಿಧೇಯಕವನ್ನು ಜಾರಿಗೆ ತರಬೇಕು. ಇಲ್ಲದೇ ಹೋದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಯಶವಂತರಾವ್ ಸೂರ್ಯವಂಶಿ, ವಿಜಯಕುಮಾರ್ ಮಠಪತಿ, ವಿಜಯಕುಮಾರ್ ಖಾನಾಪೂರ್, ಯಶವಂತ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.