371(ಜೆ) ಕಲಂ ಸಂಪುಟ ಉಪ ಸಮಿತಿಗೆ ಕಲ್ಯಾಣದ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲು ದಸ್ತಿ ಅಗ್ರಹ

ಕಲಬುರಗಿ.ಮೇ.31: 371ನೇ(ಜೆ) ಕಲಂ ಸಂಪುಟ ಉಪ ಸಮಿತಿಗೆ ಕಲ್ಯಾಣ ಕರ್ನಾಟಕದ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರು ಒತ್ತಾಯಿಸಿದ್ದಾರೆ.
ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಜನಮಾನಸದ ಇಚ್ಛೆಯಂತೆ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಮನವರಿಕೆ ಮಾಡಿಕೊಂಡಿರುವಂತೆ, ಸಂಪುಟದಲ್ಲಿ 8 ಸ್ಥಾನ ಸಿಕ್ಕಿರುವುದು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸಚಿವರನ್ನೇ ನೇಮಕ ಮಾಡುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆಯವರು ಅಧಿಕೃತವಾಗಿ ಪ್ರಕಟಿಸಿರುವುದು ಸಂತಸ ತಂದಿದೆ. ಇದಕ್ಕೆ ಪೂರಕವಾಗಿ ಮಹತ್ವದ ಸ್ಥಾನವಾದ 371ನೇ(ಜೆ) ಕಲಂ ಸಂಪುಟ ಉಪ ಸಮಿತಿಗೆ ಕಲ್ಯಾಣ ಕರ್ನಾಟಕ ಪ್ರದೇಶದ 8 ಜನ ಸಚಿವರಲ್ಲಿ ಒಬ್ಬರನ್ನು ಸಂಪುಟ ಉಪ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ನೂತನ ಸರ್ಕಾರ ಬೇಡಿಕೆಗೆ ಸ್ಪಂದಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. 371ನೇ(ಜೆ) ಕಲಂ ತಿದ್ದುಪಡಿಯಾಗಿ ಜಾರಿಯಾದ ನಂತರ ಮೊಟ್ಟ ಮೊದಲು ಕಿತ್ತೂರು ಕರ್ನಾಟಕದ ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್ ಅವರನ್ನು ಸಂಪುಟ ಉಪ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಆ ಸಂದರ್ಭದಲ್ಲಿ ನಮ್ಮ ಪ್ರದೇಶದಿಂದ ಪ್ರತಿರೋಧವಾಗಿತ್ತು. ನಂತರ ಅವರು ಸಮುಜಾಯಿಷಿ ಉತ್ತರ ನೀಡಿದ ನಂತರ ನಾವು ಒಪ್ಪಿಕೊಂಡರೂ ಸಹ ಎಚ್.ಕೆ. ಪಾಟೀಲ್ ಅವರಿಂದ ನಿರೀಕ್ಷೆಗೆ ತಕ್ಕಂತೆ ನಿಯಮಾವಳಿಗಳು ರೂಪಿಸುವಲ್ಲಿ ಇಚ್ಛಾಶಕ್ತಿ ವ್ಯಕ್ತಪಡಿಸಲಿಲ್ಲ. ನಂತರ ಹಿಂದಿನ ಸರಕಾರದಲ್ಲಿ ಗೋವಿಂದ್ ಕಾರಜೋಳ್ ಅವರೂ ಸಹ ಸಂಪುಟ ಉಪ ಸಮಿತಿಯ ಅಧ್ಯಕ್ಷರಿದ್ದಾಗ 371ನೇ(ಜೆ) ಕಲಂ ಅನುಷ್ಠಾನಕ್ಕೆ ಸಂಪೂರ್ಣ ನಿರ್ಲಕ್ಷ ಮಾಡಿ ಒಂದು ಸಭೆಯೂ ಕರೆಯದೆ ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಕಾರಣದಿಂದ ಸಮಿತಿ ನೂತನ ಸರ್ಕಾರವು 371ನೇ(ಜೆ) ಕಲಂ ಅನುಷ್ಠಾನಕ್ಕೆ ಸಂಬಂಧಿಸಿದಂತಹ ಮಹತ್ವದ ಸಂಪುಟ ಉಪ ಸಮಿತಿಗೆ ಕಲ್ಯಾಣ ಕರ್ನಾಟಕದ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಲ್ಯಾಣ ಕರ್ನಾಟಕದ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಶರಣಬಸಪ್ಪ ದರ್ಶನಾಪೂರ್, ರಹಿಂಖಾನ್, ಶಿವರಾಜ್ ತಂಗಡಗಿ, ಭೋಸರಾಜ್ ಮತ್ತು ಎನ್. ನಾಗಿಂದ್ರ ಅವರಿಗೆ ಸದರಿ ವಿಷಯಕ್ಕೆ ಗಂಭೀರವಾಗಿ ಪರಿಗಣಿಸಲು ಒತ್ತಾಯಿಸಿದ್ದಾರೆ.