ವಿಶ್ವ ಟೆಲಿವಿಷನ್ ದಿನಾಚರಣೆ

ಇದು ವಿಶ್ವ ಟೆಲಿವಿಷನ್ ದಿನಾಚರಣೆ. ಅಂತರ್ಜಾಲದ ಸಂಪರ್ಕದಿಂದಾಗಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ಸ್ಕ್ರೀನ್ ಗಳಲ್ಲೇ ಅತೀ ಹೆಚ್ಚು ಸಮಯ ಕಳೆಯುತ್ತಿರುವ ಇಂದಿನ ಜಮಾನದಲ್ಲಿ ಟೆಲಿವಿಷನ್ ಅಥವಾ ದೂರದರ್ಶನ ತನ್ನ ಮಹತ್ವ ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆಯೊಂದು ಸಹಜವಾಗಿ ಎಲ್ಲರನ್ನೂ ಕಾಡುತ್ತದೆ.

90 ನೇ ದಶಕದ ಮಧ್ಯಭಾಗದಲ್ಲಿ ಯುನೈಟೆಡ್‌ ನೇಷನ್ಸ್‌ ಮೊದಲ ವರ್ಲ್ಡ್‌ ಟೆಲಿವಿಷನ್‌ ಫೋರಮ್‌ ಅನ್ನು ಆರಂಭಿಸಿತು. ಈ ಮೂಲಕ ವರ್ಲ್ಡ್‌ ಟೆಲಿವಿಷನ್‌ ಡೇ ಆರಂಭವಾಯಿತು. ಈ ಭೂಮಿ ಮೇಲೆ ಶಾಂತಿ ಮತ್ತು ಭದ್ರತೆಯ ವಿಚಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಹಾಗೂ ಒಂದು ನಿರ್ಣಯವನ್ನು ಕೈಗೊಳ್ಳಲು ಟಿವಿಯು ಎಷ್ಟು ಪ್ರಭಾವ ಬೀರುತ್ತದೆ ಎಂದು ತಿಳಿದುಕೊಳ್ಳಲು ಪ್ರಮುಖವಾದ ಮಾಧ್ಯಮ ಇಂಡಸ್ಟ್ರಿಯನ್ನು ಒಂದು ಗೂಡಿಸಿತು ಈ ಫೋರಮ್‌.

ಡಿಸೆಂಬರ್‌ 1996ರಲ್ಲಿ ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸೆಂಬ್ಲಿಯಲ್ಲಿ ನವೆಂಬರ್‌ 21ರಂದು ವರ್ಲ್ಡ್‌ ಟೆಲಿವಿಷನ್‌ ದಿನ ಘೋಷಿಸಿತು. ಅದೇ ವರ್ಷದಲ್ಲಿ ಮೊದಲ ವಿಶ್ವ ದೂರದರ್ಶನ ಫೋರಮ… ಕೂಡ ನಡೆಯಿತು. ಇಂದಿಗೂ ದೂರದರ್ಶನವು ವೀಡಿಯೋ ಬಳಕೆ ಮಾಡುವ ಅತೀ ದೊಡ್ಡ ಮೂಲವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತದೆ. ವಿಶ್ವದಾದ್ಯಂತ ಟಿವಿ ಹೊಂದಿರುವ ಮನೆಗಳ ಸಂಖ್ಯೆ  1.74 ಮಿಲಿಯನ್ ಗೆ 2023ರ ವೇಳೆಗೆ ಹೆಚ್ಚುತ್ತದೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿ ಜಾಗತಿಕ ಸಂಸ್ಥೆ ತಿಳಿಸಿದೆ.

ವಿಶ್ವ ದೂರದರ್ಶನ ದಿನಾಚರಣೆಯು ದೃಶ್ಯ ಮಾಧ್ಯಮದ ಶಕ್ತಿಯನ್ನು ಸಂಕೇತಿಸುವ ಮತ್ತು ಹೇಗೆ ದೃಶ್ಯ ಮಾಧ್ಯಮವು ಜನರ ಅಭಿಪ್ರಾಯ ಸಂಗ್ರಹಣೆಯಲ್ಲಿ ಮತ್ತು ವಿಶ್ವದ ರಾಜಕಾರಣದ ಮೇಲೆ ಪರಿಣಾಮವನ್ನುಂಟು ಮಾಡುವ ಶಕ್ತಿಯಾಗಿದೆ ಎಂಬುದನ್ನು ನಿರೂಪಿಸುತ್ತದೆ. ವಿಶ್ವ ದೂರದರ್ಶನ ದಿನವು ಸರ್ಕಾರಗಳು, ಸುದ್ದಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹೇಗೆ ನಿಖರತೆಯುಳ್ಳ, ಪ್ರಶ್ನೆಗೆ ಅರ್ಹವಿರುವ ಸಮಯದಲ್ಲಿ ಪಕ್ಷಪಾತವಿಲ್ಲದ ಮಾಹಿತಿಯನ್ನು ತಲುಪಿಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆ ಸೂಚಿಸುತ್ತದೆ.

ಆದರೆ ಈಗಾಗಲೇ ಅತೀ ಹೆಚ್ಚು ಟಿವಿ ನೋಡುವಿಕೆಯು ವ್ಯಕ್ತಿಯ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದೆ, ಸಂಬಂಧವನ್ನು ದೂರಗೊಳಿಸುತ್ತಿದೆ, ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಸಾಬೀತುಪಡಿಸಿರುವ ನಿಟ್ಟಿನಲ್ಲಿ ಸದ್ಯ ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಿಕೆಯ ಅಗತ್ಯತೆ ಕೂಡ ಕಾಣುತ್ತಿದೆ.

 ಇತ್ತೀಚೆಗೆ ಜಮಾ ಪೀಡಿಯಾಟ್ರಿಕ್ಸ್ ನಲ್ಲಿ ಪ್ರಕಟವಾದ ಮತ್ತು ಡೈಲಿ ಮೇಲ್ ಉಲ್ಲೇಖಿಸಿದ ಅಧ್ಯಯನವೊಂದರಲ್ಲಿ ಅತೀ ಹೆಚ್ಚು ದೂರದರ್ಶನ ವೀಕ್ಷಿಸಿದ ಮತ್ತು ವೀಡಿಯೋ ಗೇಮ್ ಗಳನ್ನು ನೋಡಿದ ಮಕ್ಕಳು ಶಾಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ, ಜೊತೆಗೆ ಮಾನಸಿಕವಾಗಿ ವೀಕ್ ಆಗಿರುತ್ತಾರೆ ಎಂದು ಹೇಳಿದೆ.

ಆದರೆ ಹೆಚ್ಚಿನವರಿಗೆ ಟೆಲಿವಿಷನ್ ಮಾನಸಿಕ ನೆಮ್ಮದಿ ನೀಡುವ, ಸಮಯ ದೂಡುವ ಮತ್ತು ಮನರಂಜನೆ ನೀಡುವ ವಸ್ತುವಾಗಿದೆ. ಎಲ್ಲಾ ಋಣಾತ್ಮಕ ಅಧ್ಯಯನಗಳನ್ನು ಹೊರತುಪಡಿಸಿಯೇ ಹೇಳುವುದಾದರೆ ವಿಜ್ಞಾನಿಗಳು ಕೂಡ ಒಂದು ನಿರ್ದಿಷ್ಟ ಸಮಯವನ್ನು ಟಿವಿ ಮುಂದೆ ಕಳೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದಾಗಿ ತಿಳಿಸುತ್ತಾರೆ.